ಈ ರಾಜ್ಯದಲ್ಲಿ ಜನವರಿ 1ರಿಂದ ಪ್ಲಾಸ್ಟಿಕ್ ನಿಷೇಧ

Update: 2018-12-28 14:58 GMT

ಚೆನ್ನೈ, ಡಿ.28: ಪ್ಯಾಕ್ ಮಾಡಲ್ಪಟ್ಟ ಆಹಾರವಸ್ತು ಹೊರತುಪಡಿಸಿ ಇತರ ಪ್ಲಾಸ್ಟಿಕ್‌ಗಳನ್ನು ಬಳಸುವುದು ನಿಷೇಧಿಸಿದ್ದ ತಮಿಳುನಾಡು ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನವರಿ 1ರಿಂದ ನಿಷೇಧ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಮರುಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್‌ಗಳನ್ನು ನಿಷೇಧಿಸುವ ನಿರ್ಧಾರವನ್ನು ಜೂನ್ 5ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಪ್ರಕಟಿಸಿದ್ದರು. ಜೂನ್ 25ರಿಂದ ಈ ನಿಯಮ ಜಾರಿಗೆ ಬರುವುದಾಗಿ ಸರಕಾರ ಪ್ರಕಟಿಸಿತ್ತು. ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ನೀಲಗಿರಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಯಶಸ್ವಿಯಾದ ಹಿನ್ನೆಲೆಯಲ್ಲಿ ಸರಕಾರ ಕೈಗೊಂಡಿದ್ದ ನಿರ್ಧಾರವನ್ನು ಪರಿಸರವಾದಿಗಳು ಸ್ವಾಗತಿಸಿದ್ದರೆ ಪ್ಲಾಸ್ಟಿಕ್ ಉತ್ಪಾದಕರು ಹಾಗೂ ಸಣ್ಣ ಉದ್ದಿಮೆದಾರರು ವಿರೋಧಿಸಿದ್ದರು. ನಿಷೇಧವನ್ನು ಪ್ರಶ್ನಿಸಿ ತಮಿಳುನಾಡು ಮತ್ತು ಪುದುಚೇರಿ ಪ್ಲಾಸ್ಟಿಕ್ ಉತ್ಪಾದಕರ ಸಂಘವು ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಕಾರಣ ಸರಕಾರದ ಆದೇಶ ಜಾರಿಯಾಗಿರಲಿಲ್ಲ. ಅರ್ಜಿಯ ವಿಚಾರಣೆ ನಡೆಸಿದ ರಜಾಕಾಲದ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿದ್ದಲ್ಲದೆ ಎಲ್ಲಾ ರೀತಿಯ ಪ್ಲಾಸ್ಟಿಕ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಸಲಹೆ ನೀಡಿದೆ.

ಬಿಸ್ಕಿಟ್ ಮತ್ತಿತರ ಪ್ಯಾಕ್ ಮಾಡಲಾಗುವ ಆಹಾರಗಳನ್ನು ನಿಷೇಧದ ವ್ಯಾಪ್ತಿಯಿಂದ ಹೊರಗಿರಿಸಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ಸರಕಾರ ಬಹುರಾಷ್ಟ್ರೀಯ ಸಂಸ್ಥೆಗಳು ಹಾಗೂ ಬೃಹತ್ ಉದ್ದಿಮೆಗಳಿಗೆ ಅನುಕೂಲವಾಗುವಂತೆ ತಾರತಮ್ಯದ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News