ಬಿಕ್ಕಟ್ಟು ನಿವಾರಣೆಗೆ ರಿಪಬ್ಲಿಕನ್, ಡೆಮಾಕ್ರಟಿಕರ ನಡುವೆ ರಾಜಿಯಿಲ್ಲ

Update: 2018-12-28 15:01 GMT

ವಾಶಿಂಗ್ಟನ್, ಡಿ. 28: ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟಲು ಹಣಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಟ್ಟಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಅಮೆರಿಕ ಸರಕಾರವು ಇದೇ ಸ್ಥಿತಿಯಲ್ಲಿ ಹೊಸ ವರ್ಷಕ್ಕೆ ಕಾಲಿಡುವುದು ನಿಶ್ಚಿತವಾಗಿದೆ.

ಟ್ರಂಪ್ ಕೇಳಿದಷ್ಟು ಹಣವನ್ನು ಕೊಡಲು ಸಂಸತ್ತು ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ನಿರಾಕರಿಸಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಸರಕಾರ ನಡೆಯಲು ಅಗತ್ಯವಾಗಿರುವ ಬಜೆಟ್‌ನಲ್ಲಿ ಮೆಕ್ಸಿಕೊ ತಡೆಗೋಡೆಗೆ ಹಣ ಇಡದಿದ್ದರೆ ಬಜೆಟ್ ಅಂಗೀಕರಿಸುವುದಿಲ್ಲ ಎಂಬುದಾಗಿ ಟ್ರಂಪ್ ಪಟ್ಟು ಹಿಡಿದಿದ್ದಾರೆ. ಬಜೆಟ್ ಅಂಗೀಕಾರವಾಗದಿದ್ದರೆ ಸರಕಾರಿ ಯಂತ್ರದ ದೈನಂದಿನ ನಿರ್ವಹಣೆಗೆ ಹಣ ಸಿಗುವುದಿಲ್ಲ. ಹಾಗಾಗಿ ಸರಕಾರ ಸ್ಥಗಿತಗೊಂಡಿದೆ.

ಅಕ್ರಮ ವಲಸಿಗರ ಪ್ರವಾಹವನ್ನು ತಡೆಯಲು ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟುವುದು ಅಗತ್ಯ ಎಂಬುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ, 5 ಬಿಲಿಯ ಡಾಲರ್ (ಸುಮಾರು 35,000 ಕೋಟಿ ರೂಪಾಯಿ) ವೆಚ್ಚದ ಗಡಿ ಗೋಡೆ ಯೋಜನೆ ತೆರಿಗೆದಾರರ ಹಣವನ್ನು ಪೋಲು ಮಾಡುವ ಯೋಜನೆಯಾಗಿದೆ ಎಂಬ ಅಭಿಪ್ರಾಯವನ್ನು ಡೆಮಾಕ್ರಟಿಕ್ ಪಕ್ಷ ಹೊಂದಿದೆ.

ಅಮೆರಿಕದ ಸಂಸತ್ತಿನ ಒಂದು ಭಾಗವಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಡೆಮಾಕ್ರಟಿಕರು 2019ರಲ್ಲಿ ಬಹುಮತ ಪಡೆಯಲಿದ್ದಾರೆ. ಇನ್ನೊಂದು ಭಾಗವಾಗಿರುವ ಸೆನೆಟ್‌ನಲ್ಲಿ ಅವರು ಅಲ್ಪಮತ ಹೊಂದಿದ್ದರೂ, ಗಣನೀಯ ಸಂಖ್ಯೆಯ ಸದಸ್ಯರನ್ನು ಹೊಂದಿದ್ದಾರೆ.

ಬಿಕ್ಕಟ್ಟು ನಿವಾರಣೆಗೆ ಅಧ್ಯಕ್ಷರ ಪಕ್ಷ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ನಡುವೆ ಯಾವುದೇ ಒಮ್ಮತ ಏರ್ಪಟ್ಟಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News