×
Ad

ಉತ್ತರಪ್ರದೇಶ: ದಲಿತ ಯುವಕನ ಕಸ್ಟಡಿ ಸಾವು; ಉತ್ತರಪ್ರದೇಶ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2018-12-28 22:19 IST

ಲಕ್ನೊ, ಡಿ. 28: ಅಮ್ರೋಹ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದಲಿತ ಯುವಕನ ಕಸ್ಟಡಿ ಸಾವಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್‌ಎಚ್‌ಆರ್‌ಸಿ) ಉತ್ತರಪ್ರದೇಶ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

ಈ ಕಸ್ಟಡಿ ಸಾವು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ. ಧಾನೋರ ಮಂಡಿ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 26ರಂದು 30 ವರ್ಷದ ಯುವಕನ ಕಸ್ಟಡಿ ಸಾವು ಸಂಭವಿಸಿದ ಬಗೆಗಿನ ಮಾಧ್ಯಮ ವರದಿ ಪರಿಗಣಿಸಿ ಎನ್‌ಎಚ್‌ಆರ್‌ಸಿ ಸ್ವಯಂಪ್ರೇರಿತ ವಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರಿಗೆ ನೋಟಿಸು ಜಾರಿ ಮಾಡಿ ಘಟನೆ ಬಗ್ಗೆ ಒಂದು ವಾರಗಳ ಒಳಗೆ ವಿಸ್ತೃತ ವರದಿ ನೀಡುವಂತೆ ನಿರ್ದೇಶಿಸಿದೆ.

 ಪೊಲೀಸ್ ಕಸ್ಟಡಿಯಲ್ಲಿ ಸಾವು ಸಂಭವಿಸಿರುವ ಬಗ್ಗೆ ಎನ್‌ಎಚ್‌ಆರ್‌ಸಿ ಯಾಕೆ ಮಾಹಿತಿ ನೀಡಿಲ್ಲ ಎಂಬುದಕ್ಕೆ ಎನ್‌ಎಚ್‌ಆರ್‌ಸಿ ವಿವರಣೆ ಕೋರಿದೆ. ಕಳವು ಪ್ರಕರಣಕ್ಕೆ ಸಂಬಂಧಿಸಿ ಡಿಸೆಂಬರ್ 23ರಂದು ಯುವಕನನ್ನು ಬಂಧಿಸಲಾಗಿತ್ತು. ಆತನನ್ನು ಬಿಡುಗಡೆ ಮಾಡಲು 5 ಲಕ್ಷ ರೂ. ಲಂಚ ನೀಡುವಂತೆ ಪೊಲೀಸರು ಆಗ್ರಹಿಸಿದ್ದರು. ನಮಗೆ ಲಂಚ ನೀಡಲು ಸಾಧ್ಯವಾಗಲಿಲ್ಲ. ಆದುದರಿಂದ ಆತನಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆ ಅಡಿಯಲ್ಲಿ ದಲಿತ ಯುವಕನ ಕುಟುಂಬಕ್ಕೆ ಯಾವುದಾದರೂ ಹಣಕಾಸಿನ ಹಾಗೂ ಇತರ ಪರಿಹಾರಗಳನ್ನು ನೀಡಬೇಕೇ ಎಂಬುದನ್ನು ಕೂಡ ಉತ್ತರಪ್ರದೇಶ ಸರಕಾರ ತನ್ನ ವರದಿಯಲ್ಲಿ ಉಲ್ಲೇಖಿಸಬೇಕು ಎಂದು ಎನ್‌ಎಚ್‌ಆರ್‌ಸಿ ಹೇಳಿದೆ. ಯುವಕ ವಿವಾಹ ಮುಗಿಸಿಕೊಂಡು ಮನೆಗೆ ಹಿಂದಿರುಗುವ ಸಂದರ್ಭ ಪೊಲೀಸರು ಬಂಧಿಸಿದರು. ಯಾವುದೇ ದೂರು ದಾಖಲಾಗದೆ ಆತನನ್ನು ಲಾಕಪ್‌ನಲ್ಲಿ ಇರಿಸಿದ್ದರು ಹಾಗೂ ದೌರ್ಜನ್ಯ ಎಸಗಿದ್ದರು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಹಿತ 11 ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಎನ್‌ಎಚ್‌ಆರ್‌ಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News