×
Ad

ಬುಮ್ರಾ ಬಿರುಗಾಳಿಗೆ ಆಸ್ಟ್ರೇಲಿಯ ಧೂಳೀಪಟ

Update: 2018-12-28 23:32 IST

ಮೆಲ್ಬೋರ್ನ್, ಡಿ.28: ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಬಿರುಗಾಳಿ ಬೌಲಿಂಗ್ ದಾಳಿಗೆ ಆತಿಥೇಯ ಆಸ್ಟ್ರೇಲಿಯ ಧೂಳೀಪಟ. ಭಾರೀ ಮುನ್ನಡೆಯ ಸಂಭ್ರಮದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ದಿಢೀರ್ ಕುಸಿತ. ಆದಾಗ್ಯೂ ಪಂದ್ಯದಲ್ಲಿ ಮೇಲುಗೈ ಸಾಧಿಸಿರುವ ಕೊಹ್ಲಿ ಬಳಗ. ಟೆಸ್ಟ್‌ನ ಮೊದಲೆರಡು ದಿನ ಬ್ಯಾಟಿಂಗ್‌ಗೆ ಪೂರಕವಾಗಿದ್ದ ಪಿಚ್‌ನಲ್ಲಿ ಇಂದು ಒಂದೇ ದಿನ ಒಟ್ಟು 15 ವಿಕೆಟ್ ಪತನವಾಗಿದ್ದು, ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಕ್ಷೀಣಿಸಿದೆ. ಇವು ಮೂರನೇ ಟೆಸ್ಟ್‌ನ 3ನೇ ದಿನದ ಮುಖ್ಯಾಂಶವಾಗಿವೆ.

ಆಸ್ಟ್ರೇಲಿಯದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ರಿಂದ ವೀಕ್ಷಕವಿವರಣೆ ವೇಳೆ ‘‘ಜೀನಿಯಸ್’’ ಎಂದು ಶ್ಲಾಘನೆಗೆ ಒಳಗಾದ ವೇಗದ ಬೌಲರ್ ಬುಮ್ರಾ 15.5 ಓವರ್‌ಗಳಲ್ಲಿ 33 ರನ್ ವೆಚ್ಚದಲ್ಲಿ ಆಸೀಸ್‌ನ ಆರು ವಿಕೆಟ್‌ಗಳನ್ನು ಉಡಾಯಿಸಿ ಜೀವನಶ್ರೇಷ್ಠ ಬೌಲಿಂಗ್ ಮಾಡಿದರು. ಬುಮ್ರಾ ಒಂದೇ ವರ್ಷದಲ್ಲಿ ದಕ್ಷಿಣ ಆಫ್ರಿಕ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನೆಲದಲ್ಲಿ ಐದು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ ಉಪಖಂಡದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಬುಮ್ರಾ ಆಸ್ಟ್ರೇಲಿಯದಲ್ಲಿ ದ್ವಿತೀಯ ಶ್ರೇಷ್ಠ ಬೌಲಿಂಗ್ ಸಂಘಟಿಸಿದರು. ಕಪಿಲ್‌ದೇವ್ 1985ರಲ್ಲಿ ಅಡಿಲೇಡ್ ಟೆಸ್ಟ್‌ನಲ್ಲಿ 106 ರನ್‌ಗೆ 8 ವಿಕೆಟ್‌ಗಳನ್ನು ಉಡಾಯಿಸಿದ್ದರು. 1977ರಲ್ಲಿ ಬಿ. ಚಂದ್ರಶೇಖರ್(6-52)ನಿರ್ಮಿಸಿದ್ದ ಶ್ರೇಷ್ಠ ಬೌಲಿಂಗ್ ಸಾಧನೆಯನ್ನು ಮೀರಿಸಿದ್ದರು.

ಭಾರತದ ಮೊದಲ ಇನಿಂಗ್ಸ್ ಮೊತ್ತ 443 ರನ್‌ಗೆ ಉತ್ತರಿಸಹೊರಟ ಆಸ್ಟ್ರೇಲಿಯ 3ನೇ ದಿನವಾದ ಶುಕ್ರವಾರ ವಿಕೆಟ್ ನಷ್ಟವಿಲ್ಲದೆ 8 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ದಿನದ ಐದನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಮಾಯಾಂಕ್ ಅಗರ್ವಾಲ್ ಪಡೆದ ಚುರುಕಿನ ಕ್ಯಾಚ್‌ಗೆ ಆಸೀಸ್ ಆರಂಭಿಕ ಆಟಗಾರ ಆ್ಯರೊನ್ ಫಿಂಚ್(8)ವಿಕೆಟ್ ಕೈಚೆಲ್ಲಿದರು. 4 ಓವರ್ ಬಳಿಕ ಮಾರ್ಕಸ್ ಹ್ಯಾರಿಸ್(22)ಬುಮ್ರಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದ ದಾಂಡಿಗ ಉಸ್ಮಾನ್ ಖ್ವಾಜಾ(21)ಸ್ಪಿನ್ನರ್ ರವೀಂದ್ರ ಜಡೇಜಗೆ ವಿಕೆಟ್ ಒಪ್ಪಿಸಿದಾಗ ಆಸ್ಟ್ರೇಲಿಯ ಸ್ಕೋರ್ 20ನೇ ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 53.

ಶಾನ್ ಮಾರ್ಷ್(19) ಹಾಗೂ ಟ್ರಾವಿಸ್ ಹೆಡ್(20)ನಾಲ್ಕನೇ ವಿಕೆಟ್‌ಗೆ 36 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಲು ಯತ್ನಿಸಿದರು.ಆದರೆ, ಬುಮ್ರಾ ಅವರ ಬೌಲಿಂಗ್‌ಗೆ ನಿರುತ್ತರವಾದ ಮಾರ್ಷ್ 19 ರನ್‌ಗೆ ಔಟಾದರು. ಆತಿಥೇಯರು 41ನೇ ಓವರ್‌ನಲ್ಲಿ 100 ರನ್ ದಾಟಲು ಸಮರ್ಥರಾದರು. ಪೈನ್ ಹಾಗೂ ಪ್ಯಾಟ್ ಕಮಿನ್ಸ್ 7ನೇ ವಿಕೆಟ್‌ಗೆ 36 ರನ್ ಸೇರಿಸಿ ತಂಡವನ್ನು ಗೌರವಾರ್ಹ ಮೊತ್ತದತ್ತ ಮುನ್ನಡೆಸಲು ಯತ್ನಿಸಿದರು. ಆದರೆ ಭಾರತದ ಬೌಲಿಂಗ್ ಒತ್ತಡವನ್ನು ನಿಭಾಯಿಸಲು ವಿಫಲರಾದರು. 2 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಕಮಿನ್ಸ್(17)ರನ್ನು ಕ್ಲೀನ್‌ಬೌಲ್ಡ್ ಮಾಡಿದ ವೇಗದ ಬೌಲರ್ ಮುಹಮ್ಮದ್ ಶಮಿ ಭಾರತಕ್ಕೆ ಮತ್ತೊಮ್ಮೆ ಮೇಲುಗೈ ಒದಗಿಸಿದರು.

ಆಸ್ಟ್ರೇಲಿಯ ಟೀ ವಿರಾಮದ ವೇಳೆಗೆ 145 ರನ್‌ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವಿರಾಮದ ಬಳಿಕ ಆಸ್ಟ್ರೇಲಿಯ ಕೇವಲ 4 ಓವರ್‌ಗಳಲ್ಲಿ ಕೆಳ ಕ್ರಮಾಂಕದ ಆಟಗಾರರನ್ನು ಬೇಗನೆ ಕಳೆದುಕೊಂಡು ಸರ್ವಪತನವಾಯಿತು. ಬುಮ್ರಾ ಮೊದಲಿಗೆ ನಾಯಕ ಪೈನ್(22) ವಿಕೆಟ್ ಕಬಳಿಸಿದರು. ಆ ಬಳಿಕ ಸ್ಪಿನ್ನರ್ ನಥಾನ್ ಲಿಯೊನ್(0)ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದರು. 3 ಎಸೆತಗಳ ಬಳಿಕ ಜೋಶ್ ಹೆಝಲ್‌ವುಡ್(0)ವಿಕೆಟನ್ನು ಪಡೆದ ಬುಮ್ರಾ ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ್ನು 151 ರನ್‌ಗೆ ನಿಯಂತ್ರಿಸಿದರು. ಭಾರತಕ್ಕೆ 292 ರನ್ ಮುನ್ನಡೆ ಒದಗಿಸಿ ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತ 54/5: ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತದ ಅರ್ಧ ತಂಡ ಪೆವಿಲಿಯನ್‌ಗೆ ವಾಪಸಾಗಿದೆ.

ಪ್ರವಾಸಿಗರು ದಿನದಾಟದಂತ್ಯಕ್ಕೆ 27 ಓವರ್‌ಗಳಲ್ಲಿ 54 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದಾರೆ. ಒಟ್ಟು 346 ರನ್ ಮುನ್ನಡೆಯಲ್ಲಿದ್ದಾರೆ.

ಚೊಚ್ಚಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 76 ರನ್ ಗಳಿಸಿ ಗಮನಾರ್ಹ ಪ್ರದರ್ಶನ ನೀಡಿದ್ದ ಕನ್ನಡಿಗ ಮಾಯಾಂಕ್ ಅಗರ್ವಾಲ್ 2ನೇ ಇನಿಂಗ್ಸ್‌ನಲ್ಲೂ ಉತ್ತಮ ಮೊತ್ತ ಗಳಿಸುವ ವಿಶ್ವಾಸ ಮೂಡಿಸಿದ್ದಾರೆ. ಘಟಾನುಘಟಿ ದಾಂಡಿಗರು ಪೆವಿಲಿಯನ್‌ಗೆ ಸೇರಿದ್ದರೂ ಕ್ರೀಸ್‌ಗೆ ಅಂಟಿಕೊಂಡು ಆಡಿದ ಮಾಯಾಂಕ್ ಔಟಾಗದೆ 28 ರನ್(79 ಎಸೆತ, 4 ಬೌಂಡರಿ) ಗಳಿಸಿದ್ದಾರೆ. ವಿಕೆಟ್‌ಕೀಪರ್ ರಿಷಭ್ ಪಂತ್(6) ಮಾಯಾಂಕ್‌ಗೆ ಸಾಥ್ ನೀಡುತ್ತಿದ್ದಾರೆ.

 ಎರಡನೇ ಇನಿಂಗ್ಸ್‌ನಲ್ಲಿ ಭಾರತಕ್ಕೆ ವೇಗದ ಬೌಲರ್ ಪ್ಯಾಟ್ ಕಮಿನ್ಸ್(4-10)ಬೆಂಬಿಡದೆ ಕಾಡಿದರು. 19 ಎಸೆತಗಳಲ್ಲಿ 2 ರನ್ ನೀಡಿ 4 ವಿಕೆಟ್ ಉಡಾಯಿಸಿದರು. ನಾಯಕ ವಿರಾಟ್ ಕೊಹ್ಲಿ(0) ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ(0)ಅವರನ್ನು ಸತತ ಎಸೆತಗಳಲ್ಲಿ ಕಮಿನ್ಸ್ ಪೆವಿಲಿಯನ್‌ಗೆ ಕಳುಹಿಸಿದರು. ರೋಹಿತ್ ಶರ್ಮಾ(5) ಕಮಿನ್ಸ್‌ಗೆ ಹ್ಯಾಟ್ರಿಕ್ ವಿಕೆಟ್ ನಿರಾಕರಿಸಿದರು. ಆದರೆ, ಅವರು ದಿನದಾಟದಂತ್ಯಕ್ಕೆ ಹೆಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿಆಕರ್ಷಕ ಶತಕ ಸಿಡಿಸಿದ್ದ ಚೇತೇಶ್ವರ ಪೂಜಾರ ಖಾತೆ ತೆರೆಯುವ ಮೊದಲೇ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಹನುಮ ವಿಹಾರಿ 13 ರನ್ ಗಳಿಸಲಷ್ಟೇ ಶಕ್ತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News