ಕಾಕಿನಾಡ ಬಂದರಿನಲ್ಲಿ ಕಾರ್ಮಿಕರ ಮೇಲೆ ಕುಸಿದುಬಿದ್ದ ಕ್ರೇನ್: ಓರ್ವ ಸಾವು, 10 ಮಂದಿಗೆ ಗಾಯ
ಕಾಕಿನಾಡ, ಡಿ.29:ದುರಸ್ತಿಗೊಂಡಿದ್ದ ಎರಡು ಬೃಹತ್ ಕ್ರೇನ್‌ಗಳು ಕಾರ್ಮಿಕರ ಮೇಲೆಯೇ ಕುಸಿದುಬಿದ್ದ ಕಾರಣ ಓರ್ವ ಮೃತಪಟ್ಟು ಹತ್ತು ಮಂದಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಆಳಸಮುದ್ರ ಬಂದರಿನಲ್ಲಿ ಶನಿವಾರ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂದರಿನಲ್ಲಿ ಬೆಳಿಗ್ಗೆ ಕಾರ್ಮಿಕರು ಹಡಗುಗಳಿಂದ ಸರಕು ನಿರ್ವಹಣೆ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸರಕು ಲೋಡ್ ಮಾಡುವುದು ಮತ್ತು ಇಳಿಸುವ ಕೆಲಸಕ್ಕೆ ಬಳಸುತ್ತಿದ್ದ ಎರಡು ಬೃಹತ್ ಕ್ರೇನ್‌ಗಳು ಹಾಳಾಗಿದ್ದು ಅವನ್ನು ದುರಸ್ಥಿಗೊಳಿಸಿ ಮತ್ತೆ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಏಕಾಏಕಿ ಕ್ರೇನ್‌ಗಳು ಕುಸಿದುಬಿದ್ದಾಗ ಅದರಡಿ ಸಿಲುಕಿದ ಓರ್ವ ಕಾರ್ಮಿಕ ಮೃತಪಟ್ಟಿದ್ದು 10 ಮಂದಿ ಗಾಯಗೊಂಡರು.
ತಕ್ಷಣ ಬಂದರಿನ ಸುರಕ್ಷತಾ ವಿಭಾಗದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಮೃತಪಟ್ಟ ಕಾರ್ಮಿಕನನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ವಟ್ಟಿಪಲ್ಲಿ ಲಕ್ಷ್ಮಣ್ ಕುಮಾರ್(35 ವರ್ಷ) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.