×
Ad

ಹಿಂದೂ ಮುಖಂಡರ ಕೊಲೆಗೆ ಸಂಚು: 7 ಅಪರಾಧಿಗಳಿಗೆ ಶಿಕ್ಷೆ ಪ್ರಕಟ

Update: 2018-12-29 23:00 IST

ಚೆನ್ನೈ, ಡಿ.29: ತಮಿಳುನಾಡಿನ ಕೊಡುಂಗಯ್ಯೂರು ಎಂಬಲ್ಲಿ 1997ರಲ್ಲಿ ನಡೆದಿದ್ದ ಹಿಂದುತ್ವ ಮುಖಂಡರ ಕೊಲೆಗೆ ಸಂಚು ಮತ್ತು ಸ್ಫೋಟಕಗಳನ್ನು ತಯಾರಿಸಿ ದುಷ್ಕೃತ್ಯಕ್ಕೆ ಪಿತೂರಿ ನಡೆಸಿದ್ದ ಪ್ರಕರಣದ 7 ಅಪರಾಧಿಗಳಿಗೆ ಚೆನ್ನೈಯ ವಿಶೇಷ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ.

ಅಪರಾಧಿಗಳ ವಿರುದ್ಧದ ನಾಲ್ಕು ಪ್ರಕರಣಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರತೀ ಅಪರಾಧಕ್ಕೂ ತಲಾ ಐದು ವರ್ಷದ ಜೈಲುಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸಬೇಕೆಂದು ನ್ಯಾಯಾಲಯ ತಿಳಿಸಿದೆ. ಶಿಕ್ಷೆಗೆ ಗುರಿಯಾದವರಲ್ಲಿ ಪಿತೂರಿ ರೂಪಿಸಿದ್ದ ಸೂತ್ರಧಾರ ಮುಹಮ್ಮದ್ ಖಾನ್ ಅಲಿಯಾಸ್ ಸಿರಾಜುದ್ದೀನ್ ಕೂಡಾ ಸೇರಿದ್ದಾನೆ. ತಮ್ಮ ಗುಂಪಿನ ಓರ್ವ ಸದಸ್ಯನ ಕೊಲೆಗೆ ಪ್ರತೀಕಾರ ತೀರಿಸಲು ಇವರು ಸಂಚು ರೂಪಿಸಿದ್ದು ಅದರಂತೆ ಬಿಜೆಪಿ, ಹಿಂದು ಮುನ್ನಣಿ ಮತ್ತು ಆರೆಸ್ಸೆಸ್ ಮುಖಂಡರ ಮೇಲೆ ದಾಳಿ ನಡೆಸಿ ಹತ್ಯೆ ನಡೆಸುವ ಸಂಚನ್ನು 1996ರ ಡಿಸೆಂಬರ್- 1997 ಮಾರ್ಚ್ ಮಧ್ಯೆ ರೂಪಿಸಲಾಗಿತ್ತು. ಆರೋಪಿಗಳಲ್ಲಿ ಇಬ್ಬರನ್ನು ಖುಲಾಸೆಗೊಳಿಸಲಾಗಿತ್ತು.

 ಈ ದುಷ್ಕೃತ್ಯವನ್ನು 2000ನೇ ಇಸವಿಯ ಬಳಿಕ ನಡೆಸಿದ್ದರೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿತ್ತು. 1997ರ ಅವಧಿಗೆ ಸಂಬಂಧಿಸಿದ ಕಾನೂನಿನಂತೆ ಶಿಕ್ಷೆ ವಿಧಿಸಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ವಿಜಯರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News