×
Ad

ರಾಜಸ್ಥಾನ: ಪಠ್ಯಪುಸ್ತಕ ಪುನರ್‌ಪರಿಶೀಲನೆಗೆ ಸರಕಾರದ ನಿರ್ಧಾರ

Update: 2018-12-29 23:02 IST

ಹೊಸದಿಲ್ಲಿ, ಡಿ.29: ರಾಜಸ್ಥಾನದಲ್ಲಿ ಈ ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರ ಪರಿಷ್ಕರಿಸಿದ್ದ ಪಠ್ಯಪುಸ್ತಕಗಳನ್ನು ಪುನರ್ ಪರಿಶೀಲಿಸಿ, ರಾಷ್ಟ್ರೀಯ ಮುಖಂಡರಾಗಿರುವ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ ಅವರು ವಹಿಸಿರುವ ಪಾತ್ರಕ್ಕೆ ಸೂಕ್ತ ಗೌರವ ನೀಡಲಾಗುವುದು ಎಂದು ರಾಜಸ್ಥಾನದ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊತಾಸ್ರ ಹೇಳಿದ್ದಾರೆ.

 ಬಿಜೆಪಿ ಸರಕಾರ ಪರಿಷ್ಕರಿಸಿರುವ ಪಠ್ಯ ಪುಸ್ತಕ ಹಾಗೂ ಇತರ ಅವಲೋಕನ ವಿಷಯಗಳನ್ನು ಸರಕಾರ ಮರುಪರಿಶೀಲಿಸಲಿದೆ ಎಂದಿರುವ ಸಚಿವರು, ಈ ಹಿಂದಿನ ಸರಕಾರ ಪಠ್ಯಕ್ರಮದಲ್ಲಿ ಯಾವೆಲ್ಲಾ ಬದಲಾವಣೆ ಮಾಡಿದೆ ಎಂಬ ಕುರಿತ ಯಥಾಸ್ಥಿತಿ ವರದಿಯನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ಅಲ್ಲದೆ ಶಾಲಾ ಮಕ್ಕಳಿಗೆ ಕೇಸರಿ ಬಣ್ಣದ ಸೈಕಲ್‌ಗಳನ್ನು ವಿತರಿಸುವ ಯೋಜನೆಯನ್ನೂ ಪರಿಶೀಲಿಸಲಾಗುವುದು. ವಿವಿಧ ಇಲಾಖೆ ಹಾಗೂ ಸಮಿತಿಗಳಿಗೆ ಅಧಿಕಾರಿಗಳನ್ನು ನೇಮಿಸುವಾಗ ಆರೆಸ್ಸೆಸ್ ಹಿನ್ನೆಲೆಯ ಅಧಿಕಾರಿಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ ಎಂಬ ಆರೋಪದ ಬಗ್ಗೆಯೂ ಗಮನ ಹರಿಸಲಾಗುವುದು ಎಂದವರು ತಿಳಿಸಿದ್ದಾರೆ. 2016ರ ಮೇ ತಿಂಗಳಿನಲ್ಲಿ ರಾಜಸ್ಥಾನದ 8ನೇ ತರಗತಿಯ ಪಠ್ಯಪುಸ್ತಕದಿಂದ ನೆಹರೂ ಹೆಸರನ್ನು ತೆಗೆದುಹಾಕಲಾಗಿತ್ತು. ಆಗ ವಿಪಕ್ಷದ ಮುಖಂಡರಾಗಿದ್ದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಈ ನಿರ್ಧಾರಕ್ಕೆ ತೀವ್ರ ವಿರೋಧ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News