×
Ad

ಮೆಲ್ಬೋರ್ನ್ ಟೆಸ್ಟ್: ಭಾರತದ ಗೆಲುವಿಗೆ ಎರಡೇ ಮೆಟ್ಟಿಲು

Update: 2018-12-29 23:44 IST

ದ್ವಿತೀಯ ಇನಿಂಗ್ಸ್‌ನಲ್ಲಿ ಆಸೀಸ್‌ನ 8 ವಿಕೆಟ್ ಪತನ

ಜಡೇಜಗೆ ಮೂರು ವಿಕೆಟ್

ಮೆಲ್ಬೋರ್ನ್, ಡಿ.29: ಪ್ಯಾಟ್ ಕಮಿನ್ಸ್ ಅವರ ಹೋರಾಟದ ಅರ್ಧಶತಕದ ಮಧ್ಯೆಯೂ ಆಸ್ಟ್ರೇಲಿಯ ತಂಡ ಭಾರತ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಪಂದ್ಯದಲ್ಲಿ ಸೋಲಿನ ಅಂಚಿಗೆ ಬಂದು ತಲುಪಿದೆ. 399ರನ್ ಗೆಲುವಿನ ಗುರಿ ಬೆನ್ನಟ್ಟಿರುವ ಕಾಂಗರೂಪಡೆ ಈಗಾಗಲೇ 258 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಗೆಲುವಿನ ಸಿಹಿಯುನ್ನಲು ಭಾರತಕ್ಕೆ ಎರಡು ವಿಕೆಟ್ ಮಾತ್ರ ಬೇಕಿದ್ದು, ಇನ್ನೂ ಒಂದು ದಿನದ ಆಟ ಬಾಕಿ ಇದೆ.

ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನ ನಾಲ್ಕನೇ ದಿನದಾಟವಾದ ಶನಿವಾರ 346ರನ್‌ಗೆ 5 ವಿಕೆಟ್‌ನೊಂದಿಗೆ ಭಾರತ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿತು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕನ್ನಡಿಗ ಮಾಯಾಂಕ್ ಅಗರ್ವಾಲ್ 28 ರನ್ ಹಾಗೂ ರಿಷಭ್ ಪಂತ್ 6 ರನ್‌ನೊಂದಿಗೆ ದಿನದಾಟ ಆರಂಭಿಸಿದರು. ದಿನದ ಆರಂಭದಲ್ಲೇ ಆಕ್ರಮಣಕಾರಿ ಮನೋಭಾವ ತೋರಿದ ಅಗರ್ವಾಲ್ ನಥಾನ್ ಲಿಯೊನ್ ಅವರ ಓವರ್‌ವೊಂದರಲ್ಲಿ 2 ಸಿಕ್ಸರ್ ಬಾರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಪ್ಯಾಟ್ ಕಮಿನ್ಸ್, ಅಗರ್ವಾಲ್(42) ಅವರನ್ನು ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ದಾರಿ ತೋರಿದರು. ಈ ವಿಕೆಟ್ ಕಮಿನ್ಸ್ ಅವರಿಗೆ 17ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದ ಶ್ರೇಯ ತಂದುಕೊಟ್ಟಿತು. ಈ ಐದು ವಿಕೆಟ್ ಪಡೆಯಲು ಅವರು ವ್ಯಯಿಸಿದ್ದು 9 ಓವರ್‌ಗಳಲ್ಲಿ ಕೇವಲ 14 ರನ್.

ಇಷ್ಟಕ್ಕೇ ತೃಪ್ತಿಯಾಗದ ಕಮಿನ್ಸ್, ಜಡೇಜ ಅವರನ್ನು ಖ್ವಾಜಾ ಅವರಿಗೆ ಕ್ಯಾಚ್ ನೀಡುವಂತೆ ಪ್ರೇರೇಪಿಸಿ ವಿಕೆಟ್ ಪಡೆದರು.ಆಗ ಜಡೇಜ ಅವರ ಸ್ಕೋರ್ ಕೇವಲ 5 ರನ್. ಈ ವೇಳೆ ಕಮಿನ್ಸ್ ತಮ್ಮ ಜೀವನಶ್ರೇಷ್ಠ(27ಕ್ಕೆ6) ಸಾಧನೆ ಮಾಡಿದರು. ಹೆಝಲ್‌ವುಡ್ ಅವರು ವಿಕೆಟ್‌ಕೀಪರ್ ದಾಂಡಿಗ ಪಂತ್‌ರನ್ನು (33)ಪೆವಿಲಿಯನ್‌ಗೆಅಟ್ಟಿದಾಗ ಭಾರತ ತನ್ನ ಎರಡನೇ ಇನಿಂಗ್ಸ್‌ನಲ್ಲಿ 108 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡಿತ್ತು. ಕೊಹ್ಲಿ ಈ ಹಂತದಲ್ಲಿ ಡಿಕ್ಲೇರ್ ಘೋಷಿಸಿದರು.

ಒಟ್ಟು 399 ರನ್‌ಗಳ ಬೃಹತ್ ಮೊತ್ತದ ಗೆಲುವಿನ ಗುರಿ ಬೆನ್ನಟ್ಟಿದ ಆಸೀಸ್‌ಗೆ ಪ್ರಥಮ ಇನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದಿದ್ದ ಬುಮ್ರಾ, ಆರಂಭದಲ್ಲೇ ಆಘಾತ ನೀಡಿದರು. ಫಿಂಚ್ 3 ರನ್ ಗಳಿಸಿ ನಾಯಕ ಕೊಹ್ಲಿಗೆ ಕ್ಯಾಚ್ ನೀಡಿದಾಗ ಭಾರತದ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು. ಏಕೆಂದರೆ ಈ ವೇಳೆ ಆಸೀಸ್ ಕೇವಲ 6 ರನ್ ಗಳಿಸಿತ್ತು. ಸ್ಪಿನ್ನರ್ ರವೀಂದ್ರ ಜಡೇಜ ಆತಿಥೇಯರಿಗೆ ಮತ್ತೊಂದು ಆಘಾತ ನೀಡಿದರು. ಮಾರ್ಕಸ್ ಹ್ಯಾರಿಸ್(13)ರನ್ನು ಮಾಯಾಂಕ್ ಅಗರ್ವಾಲ್‌ಗೆ ಕ್ಯಾಚ್ ನೀಡಲು ಪ್ರೇರೇಪಿಸಿ ಯಶಸ್ವಿಯಾದರು. ಉತ್ತಮ ಆಟವಾಡುತ್ತಿದ್ದ ಉಸ್ಮಾನ್ ಖ್ವಾಜಾ(33), ಮುಹಮ್ಮದ್ ಶಮಿಯ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಈ ಹಂತದಲ್ಲಿ ಆಸೀಸ್ 63ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು.

ಬುಮ್ರಾ ಅವರ ಮತ್ತೊಂದು ಎಲ್‌ಬಿಡಬ್ಲು ಬಲೆಗೆ ಶಾನ್ ಮಾರ್ಷ್(44) ವಿಕೆಟ್ ಒಪ್ಪಿಸಿದರೆ ಅವರ ಸಹೋದರ ಮಿಚೆಲ್ ಮಾರ್ಷ್ (10) ಜಡೇಜಗೆ ವಿಕೆಟ್ ಒಪ್ಪಿಸಿದರು. ಪಂದ್ಯವನ್ನು ಉಳಿಸಿಕೊಳ್ಳುವ ಆಸೀಸ್‌ನ ಆಸೆ ಹಂತ ಹಂತವಾಗಿ ಕ್ಷೀಣಿಸುತ್ತಾ ಬಂದಿತು. ಟ್ರಾವಿಸ್ ಹೆಡ್(33) ಅಲ್ಪ ಹೋರಾಟ ನಡೆಸಿದರೂ ಇಶಾಂತ್ ಶರ್ಮಾ ಅವರ ಸುಂದರ ಎಸೆತವೊಂದಕ್ಕೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಟಿಮ್ ಪೈನ್(26) ಜಡೇಜ ಎಸೆತದಲ್ಲಿ ಪಂತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಹೋರಾಟದ ಅರ್ಧಶತಕ(ಅಜೇಯ 61) ಸಿಡಿಸಿರುವ ಕಮಿನ್ಸ್ ಹಾಗೂ ನಥಾನ್ ಲಿಯೊನ್(6) ಕ್ರೀಸ್ ಕಾಯ್ದುಕೊಂಡಿದ್ದು, ಎಷ್ಟು ಅವಧಿಯವರೆಗೆ ಭಾರತದ ಗೆಲುವನ್ನು ಮುಂದೂಡುತ್ತಾರೆ ಎನ್ನುವುದಷ್ಟೇ ರವಿವಾರ ನಿರ್ಧಾರವಾಗಬೇಕಿದೆ.

ವಿಕೆಟ್ ಗಳಿಕೆಯಲ್ಲಿ ಬುಮ್ರಾ ದಾಖಲೆ

ಟೆಸ್ಟ್‌ಗೆ ಕಾಲಿಟ್ಟ ಪ್ರಥಮ ವರ್ಷದಲ್ಲೇ ಅತಿ ಹೆಚ್ಚು (45)ವಿಕೆಟ್ ಪಡೆಯುವ ಮೂಲಕ ಭಾರತದ ಬುಮ್ರಾ ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಮೆಲ್ಬೋರ್ನ್ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಆಸೀಸ್‌ನ 6 ವಿಕೆಟ್ ಕಬಳಿಸುವುದರೊಂದಿಗೆ ಅವರು ಈ ವರ್ಷ ಒಟ್ಟು 9 ಟೆಸ್ಟ್‌ಗಳಿಂದ 45 ವಿಕೆಟ್‌ಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿದ್ದಾರೆ. ಎಲ್ಲ 9ಟೆಸ್ಟ್‌ಗಳನ್ನು ವಿದೇಶಗಳಲ್ಲಿ ಆಡುವ ಮೂಲಕ ವಿದೇಶದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎಂಬ ಸಾಧನೆಗೂ ಅವರು ಭಾಜನರಾಗಿದ್ದಾರೆ. ಮುಹಮ್ಮದ್ ಶಮಿ 43 ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News