×
Ad

ದ್ವಿತೀಯ ಟೆಸ್ಟ್‌: ಗೆಲುವಿನ ಹಾದಿಯಲ್ಲಿ ಕಿವೀಸ್

Update: 2018-12-29 23:50 IST

ಕ್ರೈಸ್ಟ್‌ಚರ್ಚ್, ಡಿ.29: ಸಂಘಟಿತ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿನ್ಯೂಝಿಲೆಂಡ್ ತಂಡ ಗೆಲುವಿನ ಹಾದಿಯಲ್ಲಿದೆ. ಇಲ್ಲಿಯ ಹ್ಯಾಗ್ಲಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 660 ರನ್‌ಗಳ ಬೃಹತ್ ಗೆಲುವಿನ ಗುರಿ ಬೆನ್ನಟ್ಟಿರುವ ಲಂಕಾ, ನಾಲ್ಕನೇ ದಿನದಾಟ ಮುಕ್ತಾಯಗೊಂಡಾಗ 231ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ದಿಲ್ರುವಾನ್ ಪೆರೇರ(22) ಹಾಗೂ ಸುರಂಗ ಲಕ್ಮಲ್(16) ಕ್ರೀಸ್‌ನಲ್ಲಿದ್ದರು. ಪಂದ್ಯ ಮತ್ತು ಸರಣಿಯನ್ನು ಉಳಿಸಿಕೊಳ್ಳಲು ಶ್ರೀಲಂಕಾ ರವಿವಾರ ದಿನಪೂರ್ತಿ ಬ್ಯಾಟಿಂಗ್ ಮಾಡಬೇಕಾದ ಒತ್ತಡಕ್ಕೆ ಸಿಲುಕಿದೆ.

ಟಾಮ್ ಲಥಮ್(176) ಹಾಗೂ ನಿಕೊಲ್ಸ್ (ಅಜೇಯ 162) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕಿವೀಸ್ ಶುಕ್ರವಾರ ದ್ವಿತೀಯ ಇನಿಂಗ್ಸ್ ನಲ್ಲಿ 585 ರನ್‌ಗಳ ಬೃಹತ್ ಮೊತ್ತ ಜಮೆಮಾಡಿತ್ತು.

ಒಟ್ಟು 660 ರನ್ ಗುರಿ ಬೆನ್ನಟ್ಟಿರುವ ಶ್ರೀಲಂಕಾ 24ರನ್‌ಗೆ ಎರಡು ವಿಕೆಟ್‌ಗಳಿಂದ ಶನಿವಾರ ದಿನದಾಟ ಆರಂಭಿಸಿತು.

ದಿನೇಶ್ ಚಾಂಡಿಮಲ್ (56) ಹಾಗೂ ಕುಸಾಲ್ ಮೆಂಡಿಸ್(67) ಉತ್ತಮ ಜೊತೆಯಾಟದಿಂದಾಗಿ ಪಂದ್ಯ ಡ್ರಾದತ್ತ ಸಾಗುವಂತಿತ್ತು. ಕಿವೀಸ್‌ನ ವ್ಯಾಗ್ನರ್ ಈ ಇಬ್ಬರ ವಿಕೆಟ್ ಪಡೆಯುವ ಮೂಲಕ ಪಾರಮ್ಯ ಮೆರೆದರು. ಆ್ಯಂಜೆಲೊ ಮ್ಯಾಥ್ಯೂಸ್(22) ಗಾಯಗೊಂಡು ನಿವೃತ್ತರಾಗಿದ್ದು ಶ್ರೀಲಂಕಾಗೆ ಹೊಡೆತ ನೀಡಿತು. ರೋಶನ್ ಸಿಲ್ವಾ(18) ನಿರೋಶನ್ ಡಿಕ್ವೆಲ್ಲಾ(19) ಬೇಗನೇ ವಿಕೆಟ್ ಒಪ್ಪಿಸಿದರು. ಸದ್ಯ ಶ್ರೀಲಂಕಾ 6 ವಿಕೆಟ್‌ಗೆ 231 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 429ರನ್ ಗಳಿಸಬೇಕಿದೆ. ತಂಡದ ಕೈಯಲ್ಲಿ ಕೇವಲ ನಾಲ್ಕು ವಿಕೆಟ್ ಬಾಕಿಯಿವೆ.

ಎರಡು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ನೀರಸ ಡ್ರಾ ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News