×
Ad

ಅಲಸ್ಟೈರ್ ಕುಕ್‌ಗೆ ನೆಟ್‌ಹುಡ್ ಗೌರವ

Update: 2018-12-29 23:52 IST

ಲಂಡನ್, ಡಿ.29: ಈ ವರ್ಷದ ಆರಂಭದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆವಿದಾಯ ಘೋಷಿಸಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಲಸ್ಟೈರ್ ಕುಕ್‌ಗೆ ಪ್ರತಿಷ್ಠಿತ ‘ನೈಟ್‌ಹುಡ್’ ಗೌರವ ಘೋಷಿಸಲಾಗಿದೆ.

2007ರಲ್ಲಿ ಇಂಗ್ಲೆಂಡಿನ ಖ್ಯಾತ ಆಲ್‌ರೌಂಡರ್ ಇಯಾನ್ ಬಾಥಂ ಬಳಿಕ ನೈಟ್‌ಹುಡ್ ಗೌರವ ಪಡೆಯುತ್ತಿರುವ ಮೊದಲ ಕ್ರಿಕೆಟಿಗನಾಗಿದ್ದಾರೆ ಕುಕ್. ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ರನ್ ಗಳಿಸಿರುವ (12,472) ಆಟಗಾರ ಎನಿಸಿಕೊಂಡಿರುವ ಕುಕ್, 161 ಟೆಸ್ಟ್ ಪಂದ್ಯಗಳಲ್ಲಿ 33 ಶತಕ ಬಾರಿಸಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ ಭಾರತದ ಎದುರು ಓವಲ್ ಟೆಸ್ಟ್‌ನಲ್ಲಿ ತಮ್ಮ ಅಂತಿಮ ಪಂದ್ಯ ಆಡಿದ್ದ 34 ವರ್ಷದ ಕುಕ್, ವಿದಾಯದ ಪಂದ್ಯದಲ್ಲಿ ಶತಕ ಬಾರಿಸಿದ ಅಪರೂಪದ ಸಾಧನೆ ಮಾಡಿದ್ದರು. ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದಂದಿನಿಂದ ಕ್ರಿಕೆಟ್ ಆಟದ ಘನತೆಯನ್ನು ಎತ್ತಿ ಹಿಡಿದಿದ್ದಲ್ಲದೆ ಅಮೋಘ ಆಟದ ಮೂಲಕ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದ ಆಟಗಾರನಿಗೆ ಇದು ಸೂಕ್ತ ಗೌರವವಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುಕ್ ಜೊತೆಗೆ ಇಂಗ್ಲೆಂಡ್ ರಗ್ಬಿ ತಂಡದ ಮಾಜಿ ನಾಯಕ ಬಿಲ್ ಬ್ಯೂಮೋಂಟ್ ಅವರೂ ನೈಟ್‌ಹುಡ್ ಗೌರವಕ್ಕೆ ಪಾತ್ರರಾಗಿದ್ದಾರೆ. ನೈಟ್‌ಹುಡ್ ಗೌರವ ಪಡೆದವರ ಹೆಸರಿನ ಎದುರು ‘ಸರ್’ ಎಂಬ ವಿಶೇಷಣ ಸೇರಿಕೊಳ್ಳುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News