‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ನಿರ್ದೇಶಕನ ತಂದೆ ‘ಆ್ಯಕ್ಸಿಡೆಂಟಲ್ ರೈತ’!

Update: 2018-12-30 14:31 GMT

ಹೊಸದಿಲ್ಲಿ, ಡಿ.30: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರು ಬರೆದ ಕೃತಿಯನ್ನಾಧರಿಸಿದ ಚಿತ್ರ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ವಿವಾದಗಳಿಂದ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ನಲ್ಲಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಹೆಸರಿಗೆ ಮಸಿ ಬಳಿಯಲು ಯತ್ನಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ಲೋಕಸಭೆ ಚುನಾವಣೆ ಹೊತ್ತಿಗೆ ಚಿತ್ರ ಬಿಡುಗಡೆಯಾದರೆ ಕಾಂಗ್ರೆಸ್ ಗೆ ಹಿನ್ನಡೆಯಾಗಲಿದೆ. ಏಕೆಂದರೆ ಚಿತ್ರದಲ್ಲಿ ಮನಮೋಹನ್ ಸಿಂಗ್ ಅಧಿಕಾರವಧಿಯಲ್ಲಿ ಸರಕಾರವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರೇ ನಿಯಂತ್ರಿಸುತ್ತಿದ್ದರು, ಸಿಂಗ್ ಕೇವಲ ರಬ್ಬರ್ ಸ್ಟ್ಯಾಂಪ್ ಆಗಿದ್ದರು ಎಂಬಂತೆ ಬಿಂಬಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲುಂಡ ಬಿಜೆಪಿ ಈ ರೀತಿಯಲ್ಲಿ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಚಿತ್ರವು ಸಂಜಯ್ ಬಾರು ಅವರ ಕೃತಿಯನ್ನಾಧರಿಸಿದ್ದು, ವಿಜಯ್ ಗುಟ್ಟೆ ನಿರ್ದೇಶಿಸಿದ್ದಾರೆ. ಚಿತ್ರದ ನಿರ್ದೇಶಕ ಟ್ರೈಲರ್ ಬಿಡುಗಡೆಯ ನಂತರ ಮಾತ್ರವಲ್ಲದೆ ಅದಕ್ಕೂ ಮೊದಲೇ ಸುದ್ದಿಯಾಗಿದ್ದವರು. ಅದು 34 ಕೋಟಿ ರೂ. ಜಿಎಸ್ ಟಿ ವಂಚನೆ ಆರೋಪದಲ್ಲಿ.

ಹೌದು.. ಸುಮಾರು 34 ಕೋಟಿ ರೂ.ಗಳಷ್ಟು ಜಿಎಸ್ ಟಿ ವಂಚನೆ ಆರೋಪದಲ್ಲಿ ವಿಜಯ್ ಗುಟ್ಟೆಯನ್ನು ಜಿಎಸ್ ಟಿ ಇಂಟೆಲಿಜೆನ್ಸ್ ಮಹಾನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಹೊರೈಝಾನ್ ಔಟ್ ಸೋರ್ಸ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ಅನಿಮೇಶನ್ ಹಾಗು ಮ್ಯಾನ್ ಪವರ್ ಸೇವೆಗಳನ್ನು ಪಡೆದದ್ದಕ್ಕಾಗಿ ವಿಜಯ್ ಗುಟ್ಟೆ ಕಂಪೆನಿ 34 ಕೋಟಿ ರೂ.ಗಳ ನಕಲಿ ಇನ್ವೈಸ್ ಸೃಷ್ಟಿಸಿದೆ ಎಂದು ಆರೋಪಿಸಲಾಗಿತ್ತು.

ಇನ್ನು ವಿಜಯ್ ಗುಟ್ಟೆಯ ತಂದೆ ರತ್ನಾಕರ್ ಗುಟ್ಟೆ ವಿರುದ್ಧ ಭಾರೀ ಅವ್ಯವಹಾರದ ಆರೋಪ ಕೇಳಿಬಂದಿತ್ತು. ಗಂಗಾಖೇಡ್ ಶುಗರ್ ಆ್ಯಂಡ್ ಎನರ್ಜಿ ಪ್ರೈ.ಲಿ. ಕಂಪೆನಿಯ ನಿರ್ದೇಶಕರಾಗಿರುವ ರತ್ನಾಕರ್ ಗುಟ್ಟೆ ರೈತರ ಒಪ್ಪಿಗೆಯಿಲ್ಲದೆ ರೈತರ ಹೆಸರಿನಲ್ಲಿ ನೂರಾರು ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

ರೈತರ ಆರೋಪದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ನ ಔರಂಗಬಾದ್ ಪೀಠವು ಈ ಪ್ರಕರಣದ ತನಿಖೆಗೆ ಆದೇಶಿಸಿತ್ತು. ರೈತರು ಅರ್ಜಿ ಸಲ್ಲಿಸದೆ 5 ರಾಷ್ಟ್ರೀಕೃತ ಮತ್ತು ಒಂದು ಖಾಸಗಿ ಬ್ಯಾಂಕ್ 328 ಕೋಟಿ  ರೂ. ಸಾಲ ಮಂಜೂರು ಮಾಡಿತ್ತು. ಈ ಮೊತ್ತವು ಗಂಗಾಖೇಡ್ ಸಕ್ಕರೆ ಕಾರ್ಖಾನೆಯ ಖಾತೆಗೆ ವರ್ಗಾವಣೆಯಾಗಿದೆ ಎಂದು asianage.com 2017 ಜುಲೈ 11ರಂದು ವರದಿ ಮಾಡಿದೆ.

ನಕಲಿ ದಾಖಲೆಗಳನ್ನು ಸಲ್ಲಿಸಿ ರೈತರ ಹೆಸರಿನಲ್ಲಿ ರತ್ನಾಕರ್ ಗುಟ್ಟೆ 5400 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ ಧನಂಜಯ್ ಮುಂಡೆ ಆರೋಪಿಸಿದ್ದರು. ಈ ಬಗ್ಗೆ deccanchronicle.com 2018 ಜುಲೈ 18ರಂದು ವರದಿ ಮಾಡಿತ್ತು.

“2015ರಲ್ಲಿ ಗಂಗಾಖೇಡ್ ಸಕ್ಕರೆ ಕಾರ್ಖಾನೆಯು 600 ರೈತರ ಹೆಸರಿನಲ್ಲಿ ಬ್ಯಾಂಕ್ ಗಳಿಂದ ಸಾಲ ಪಡೆದುಕೊಂಡಿದೆ. ಇದೀಗ ರೈತರಿಗೆ ಬ್ಯಾಂಕ್ ಗಳು ನೋಟಿಸ್ ಜಾರಿಗೊಳಿಸಿದೆ. ಜುಲೈ 5ರಂದು ಗುಟ್ಟೆ ವಿರುದ್ಧ ಎಫ್ ಐಆರ್ ದಾಖಲಾಗಿದ್ದರೂ ಇದುವರೆಗೂ ಬಂಧನವಾಗಿಲ್ಲ” ಎಂದು ಧನಂಜಯ್ ಮುಂಡೆ ಆರೋಪಿಸಿದ್ದರು.

ಇಷ್ಟೇ ಅಲ್ಲದೆ ಅಕ್ರಮ ಮದ್ಯ ವಂಚನೆ ಆರೋಪವೂ ಈ ಕಂಪೆನಿಯ ವಿರುದ್ಧ ಕೇಳಿಬಂದಿತ್ತು. ಅಕ್ರಮ ಮದ್ಯ ಜಾಲಕ್ಕೆ ಗುಟ್ಟೆಯ ಡಿಸ್ಟಿಲ್ಲರಿ ಎಥನಾಲನ್ನು ಸಾಗಾಟ ಮಾಡುತ್ತಿದೆ ಎಂದು ಕಂಡುಕೊಂಡ ನಂತರ ಅಬಕಾರಿ ಕಮಿಷನರ್ ವಿ. ರಾಧಾ ಕಂಪೆನಿಯ ಲೈಸೆನ್ಸನ್ನು ರದ್ದುಪಡಿಸಿದ್ದರು.  ಕಂಪೆನಿಯ ಡಿಸ್ಟಿಲ್ಲರಿ ಲೈಸೆನ್ಸನ್ನು ರದ್ದು ಮಾಡಲಾಗಿತ್ತಾದರೂ ನಂತರ ಈ ಆದೇಶವನ್ನು ಮಹಾರಾಷ್ಟ್ರ ಸರಕಾರ ಹಿಂದೆಗೆದುಕೊಂಡಿತ್ತು. ಈ ಬಗ್ಗೆ 2017 ಅಕ್ಟೋಬರ್ 19ರಂದು indianexpress.com ವರದಿ ಮಾಡಿದೆ.

ರತ್ನಾಕರ್ ಗುಟ್ಟೆ ಆಡಳಿತ ಪಕ್ಷ ಬಿಜೆಪಿಯ ಕೆಲ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಕುಟುಂಬದೊಂದಿಗೆ ಅವರು ಆಪ್ತರಾಗಿದ್ದರು. ಬಿಜೆಪಿ ನೇತೃತ್ವದ ಮೈತ್ರಿ ಪಕ್ಷವೊಂದರಲ್ಲಿ 2014ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಸೋಲನುಭವಿಸಿದ್ದರು. ಗುಟ್ಟೆ ವಿರುದ್ಧ ಕ್ರಮ ಕೈಗೊಳ್ಳಲು ಫಡ್ನವೀಸ್ ಸರಕಾರ ಹಿಂದೇಟು ಹಾಕುತ್ತಿದೆ ಎಂದೂ ವಿಪಕ್ಷಗಳು ಆರೋಪಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News