ಸುಭಾಶ್ಚಂದ್ರ ಬೋಸ್ ಗೌರವಾರ್ಥ ಅಂಡಮಾನ್‌ನ 3 ದ್ವೀಪಗಳಿಗೆ ಮರುನಾಮಕರಣ
ಪೋರ್ಟ್‌ಬ್ಲೇರ್ , ಡಿ.30: ಪೋರ್ಟ್‌ಬ್ಲೇರ್‌ನಲ್ಲಿ ಸುಭಾಶ್ಚಂದ್ರ ಬೋಸ್ ತ್ರಿವರ್ಣ ಧ್ವಜಾರೋಹಣ ನಡೆಸಿದ ಐತಿಹಾಸಿಕ ಘಟನೆಯ 75ನೆಯ ವಾರ್ಷಿಕೋತ್ಸವದಂದು ಬೋಸ್ ಗೌರವಾರ್ಥ ಅಂಡಮಾನ್ ನಿಕೋಬಾರ್‌ನ ಮೂರು ದ್ವೀಪಗಳಿಗೆ ಮರು ನಾಮಕರಣ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರೋಸ್ ಐಲ್ಯಾಂಡ್(ದ್ವೀಪ)ವನ್ನು ಸುಭಾಶ್ಚಂದ್ರ ಬೋಸ್ ದ್ವೀಪ, ನೀಲ್ ದ್ವೀಪವನ್ನು ಶಹೀದ್ ದ್ವೀಪ ಮತ್ತು ಹ್ಯಾವ್‌ಲಾಕ್ ದ್ವೀಪವನ್ನು ಸ್ವರಾಜ್ ದ್ವೀಪವೆಂದು ಮರುನಾಮಕರಣಗೊಳಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಬೋಸ್ ಸ್ಮರಣಾರ್ಥ ಅಂಚೆ ಚೀಟಿ ಮತ್ತು 75 ರೂ. ಮುಖಬೆಲೆಯ ನಾಣ್ಯವನ್ನು ಪ್ರಧಾನಿ ಬಿಡುಗಡೆಗೊಳಿಸಿದರು. ಅಲ್ಲದೆ ಬೋಸ್ ಹೆಸರಿನಲ್ಲಿ ಪರಿಗಣಿತ (ಡೀಮ್ಡ್) ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ. ಇದಕ್ಕೂ ಮೊದಲು ಅವರು ಮರೀನಾ ಪಾರ್ಕ್‌ನಲ್ಲಿ 150 ಅಡಿ ಎತ್ತರದ ಸ್ತಂಭದ ಮೇಲೆ ರಾಷ್ಟ್ರಧ್ವಜವನ್ನು ಅರಳಿಸಿದರು ಮತ್ತು ಪಾರ್ಕ್‌ನಲ್ಲಿರುವ ಬೋಸ್ ಪ್ರತಿಮೆಗೆ ಪುಷ್ಪಾಂಜಲಿ ಸಲ್ಲಿಸಿದರು.