×
Ad

ತ್ರಿವಳಿ ತಲಾಕ್ ಮಸೂದೆಗೆ ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರೋಧ

Update: 2018-12-31 19:05 IST

ಹೊಸದಿಲ್ಲಿ,ಡಿ.31: ಕರಡು ಕಾನೂನನ್ನು ಆಯ್ಕೆ ಸಮಿತಿಯ ಅವಗಾಹನೆಗೆ ಒಪ್ಪಿಸಬೇಕೆಂದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರಿಂದ ವಿವಾದಾಸ್ಪದ ತ್ರಿವಳಿ ತಲಾಕ್ ಮಸೂದೆಯ ಮೇಲೆ ಚರ್ಚೆಯನ್ನು ಆರಂಭಿಸುವಲ್ಲಿ ರಾಜ್ಯಸಭೆಯು ಸೋಮವಾರ ವಿಫಲಗೊಂಡಿತು.

ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ,2018ರ ಕುರಿತು ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟಿನಿಂದಾಗಿ ಸದನವು ಯಾವುದೇ ಮಹತ್ವದ ಕಲಾಪಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಕೋಲಾಹಲದ ನಡುವೆಯೇ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಇದಕ್ಕೂ ಮುನ್ನ ಕಾವೇರಿ ವಿವಾದ ಕುರಿತು ಎಐಎಡಿಎಂಕೆ ಸದಸ್ಯರ ಪ್ರತಿಭಟನೆ ಸಂದರ್ಭ ಸೇರಿದಂತೆ ಎರಡು ಬಾರಿ ಸದನವನ್ನು ಮುಂದೂಡಲಾಗಿತ್ತು. ಅಪರಾಹ್ನ ತ್ರಿವಳಿ ತಲಾಕ್ ಮಸೂದೆಯನ್ನು ಮಂಡಿಸಿದ ಬೆನ್ನಿಗೇ 15 ನಿಮಿಷಗಳ ಇನ್ನೊಂದು ಮುಂದೂಡಿಕೆಗೆ ಸದನವು ಸಾಕ್ಷಿಯಾಗಿತ್ತು.

ಈ ಮಸೂದೆಯು ಅತ್ಯಂತ ನಿರ್ಣಾಯಕವಾಗಿದೆ ಮತ್ತು ಇನ್ನಷ್ಟು ಪರಿಶೀಲನೆ ಅಗತ್ಯವಾಗಿದೆ ಎಂದು ಹೇಳಿದ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು,ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಹಲವಾರು ಪಕ್ಷಗಳಿಗೆ ಸೇರಿದ ಸದಸ್ಯರಲ್ಲಿ ಅರ್ಧಕ್ಕೂ ಹೆಚ್ಚಿನವರು ಆಗ್ರಹಿಸಿದ್ದಾರೆ ಎಂದರು.

ಮಸೂದೆಗಳು ಶಾಸನಗಳಾಗುವ ಮುನ್ನ ಅವುಗಳನ್ನು ಆಯ್ಕೆ ಸಮಿತಿಗೆ ಕಳುಹಿಸುವ ಸಂಪ್ರದಾಯವನ್ನು ಸರಕಾರವು ಮುರಿಯುತ್ತಿದೆ ಎಂದು ಅವರು ಆರೋಪಿಸಿದರು.

ಈ ವಿಷಯದಲ್ಲಿ ಚರ್ಚೆಗೆ ಸರಕಾರವು ಸಿದ್ಧವಾಗಿದೆ ಎಂದ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿಜಯ ಗೋಯೆಲ್ ಅವರು,ಮಸೂದೆಯ ಅಂಗೀಕಾರಕ್ಕೆ ಕಾಂಗ್ರೆಸ್ ಅಡೆತಡೆಗಳನ್ನೊಡ್ಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಈಗಾಗಲೇ ಈ ಮೊದಲು ಲೋಕಸಭೆಯಲ್ಲ್ಲಿ ಮಸೂದೆಯನ್ನು ಬೆಂಬಲಿಸಿತ್ತು ಎಂದರು.

ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಹಕ್ಕುಗಳನ್ನು ಖಚಿತಪಡಿಸುವಲ್ಲಿ ಅತ್ಯಂತ ಮುಖ್ಯವಾಗಿರುವ ಮಸೂದೆಯ ವಿಷಯದಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಕೇವಲ ರಾಜಕೀಯವನ್ನು ಮಾಡುತ್ತಿವೆ ಎಂಬ ಗೋಯೆಲ್ ಆರೋಪಕ್ಕೆ ತಿರುಗೇಟು ನೀಡಿದ ಸದನದಲ್ಲಿ ಕಾಂಗ್ರೆಸ್ ಉಪನಾಯಕ ಆನಂದ ಶರ್ಮಾ ಅವರು,ಸರಕಾರವೇ ರಾಜಕೀಯವನ್ನು ಮಾಡುತ್ತಿದೆ. ಮಸೂದೆಯನ್ನು ಯಾರೂ ವಿರೋಧಿಸುತ್ತಿಲ್ಲ. ಅದನ್ನು ಆಯ್ಕೆ ಸಮಿತಿಯು ಪರಿಶೀಲಿಸಲು ಬಿಡಿ ಎಂದರು.

ಲೋಕಸಭೆಯು ಕಳೆದ ಗುರುವಾರ ಮಸೂದೆಯನ್ನು ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News