ಲೋಕಸಭೆಯಲ್ಲಿ ಮತ್ತೆ ರಫೇಲ್ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್

Update: 2018-12-31 14:23 GMT

ಹೊಸದಿಲ್ಲಿ,ಡಿ.31: ತನ್ನ ಪಟ್ಟು ಬಿಡದ ಕಾಂಗ್ರೆಸ್ ಸೋಮವಾರ ಲೋಕಸಭೆಯಲ್ಲಿ ಮತ್ತೆ ರಫೇಲ್ ವಿಷಯವನ್ನೆತ್ತಲು ಪ್ರಯತ್ನಿಸಿದ್ದು,ಇದಕ್ಕೆ ಪ್ರತಿಕ್ರಿಯಿಸಿದ ನೀಡಿದ ಸರಕಾರವು,ಈ ವಿಷಯದಲ್ಲಿ ಚರ್ಚೆಯಿಂದ ಪ್ರತಿಪಕ್ಷವು ನುಣುಚಿಕೊಳ್ಳುತ್ತಿದೆ ಎಂದು ಕುಟುಕಿತು.

ಶೂನ್ಯವೇಳೆಯಲ್ಲಿ ಭಿತ್ತಿಪತ್ರಗಳೊಂದಿಗೆ ಘೋಷಣೆಗಳನ್ನು ಕೂಗುತ್ತ ಸದನದ ಬಾವಿಯಲ್ಲಿ ನೆರೆದ ಕಾಂಗ್ರೆಸ್ ಸದಸ್ಯರು ಕೋಲಾಹಲವನ್ನು ಸೃಷ್ಟಿಸಿದರು.

ವಿಷಯವನ್ನೆತ್ತಿದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು,ರಫೇಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದರಲ್ಲದೆ,ಸರಕಾರವೇಕೆ ಯುದ್ಧವಿಮಾನಗಳ ಬೆಲೆಯನ್ನು ಬಹಿರಂಗಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ಸದಸ್ಯರ ತೀವ್ರ ಪ್ರತಿಭಟನೆಗಳ ನಡುವೆಯೇ ರಫೇಲ್ ಒಪ್ಪಂದದ ಕುರಿತು ಜಂಟಿ ಸಂಸದೀಯ ಸಮತಿಯಿಂದ ತನಿಖೆಗೆ ಅವರು ಆಗ್ರಹಿಸಿದರು.

ಖರ್ಗೆಯವರ ಆಗ್ರಹಕ್ಕೆ ಉತ್ತರಿಸಿದ ಗೃಹ ಸಚಿವ ರಾಜನಾಥ ಸಿಂಗ್ ಅವರು,ಒಂದೇ ಸುಳ್ಳನ್ನು ಪದೇ ಪದೇ ಹೇಳುತ್ತಿದ್ದರೆ ಅದು ಸತ್ಯವಾಗುವುದಿಲ್ಲ ಎಂದರು. ಈ ವಿಷಯದಲ್ಲಿ ಚರ್ಚೆಗೆ ಸರಕಾರವು ಸಿದ್ಧವಿದೆ,ಆದರೆ ಕಾಂಗ್ರೆಸ್ ಅದರಿಂದೇಕೆ ನುಣುಚಿಕೊಳ್ಳುತ್ತಿದೆ ಎಂದು ಅವರು ಪ್ರಶ್ನಿಸಿದರು.

ಈ ವೇಳೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸದನದಲ್ಲಿ ಉಪಸ್ಥಿತರಿದ್ದರು.

ಅಪರಾಹ್ನ ಎರಡು ಗಂಟೆಗೆ ಸದನವು ಅನುದಾನಗಳಿಗೆ ಪೂರಕ ಬೇಡಿಕೆಗಳ ಕುರಿತು ಚರ್ಚೆಯನ್ನು ಕೈಗೆತ್ತಿಕೊಳ್ಳಲು ಮಂದಾದಾಗ ಖರ್ಗೆಯವರು ಮತ್ತೊಮ್ಮೆ ರಫೇಲ್ ಒಪ್ಪಂದದಲ್ಲಿ ಜೆಪಿಸಿ ತನಿಖೆಗೆ ಆಗ್ರಹಿಸಿದರು. ಈ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು,ಖರ್ಗೆ ತಕ್ಷಣವೇ ಈ ವಿಷಯದಲ್ಲಿ ಚರ್ಚೆಯನ್ನು ಆರಂಭಿಸಬೇಕು ಮತ್ತು ಉತ್ತರಿಸಲು ಸರಕಾರವು ಸಿದ್ಧವಾಗಿದೆ ಎಂದು ಹೇಳಿದರು. ಖರ್ಗೆ ಚರ್ಚೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದರು. ರಫೇಲ್ ಒಪ್ಪಂದದ ಕುರಿತು ಚರ್ಚೆಗೆ ಒತ್ತು ನೀಡಿದ ಜೇಟ್ಲಿ,ಒಪ್ಪಂದದ ಕುರಿತು ಕಾಂಗ್ರೆಸ್ ಪಕ್ಷವು ಸುಳ್ಳುಗಳನ್ನು ಹರಡುತ್ತಿದೆ ಎನ್ನುವುದನ್ನು ತಾನು ರುಜುವಾತು ಮಾಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News