ಮೋದಿ ಭಾರತದ ಪ್ರಧಾನಿಯಾಗಿರುವವರೆಗೆ ಉಗ್ರರ ದಾಳಿ ಅಸಾಧ್ಯ ಎಂದು ಒಬಾಮಾ ಹೇಳಿದ್ದರೇ?

Update: 2018-12-31 14:55 GMT

ಹೊಸದಿಲ್ಲಿ, ಡಿ.31: "ಮೋದಿ ಭಾರತದ ಪ್ರಧಾನಿಯಾಗಿರುವವರೆಗೆ ಉಗ್ರರ ದಾಳಿ ಅಸಾಧ್ಯ- ಬರಾಕ್ ಒಬಾಮಾ" ಎಂಬ ಶೀರ್ಷಿಕೆಯ ಲೇಖನವೊಂದು ಸುದ್ದಿ ಜಾಲತಾಣದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಓರಿಯಂಟಲ್ ಟೈಮ್ಸ್ ಆಫ್ ಇಂಡಿಯಾ’ ಎಂಬ ವೆಬ್ ಸೈಟ್ ನಲ್ಲಿ ಡಿಸೆಂಬರ್ 27ರಂದು ಈ ಲೇಖನ ಪ್ರಕಟವಾಗಿದ್ದು, ಈಗ ಡಿಲಿಟ್ ಮಾಡಲಾಗಿದೆ.

ಎನ್‍ಐಎ ಇತ್ತೀಚೆಗೆ ದಾಳಿ ಮಾಡಿ ಬಂಧಿಸಿದ ಉಗ್ರರು ನವೆಂಬರ್ 29ರಂದು ಅಯೋಧ್ಯೆಯ ರಾಮ ಜನ್ಮಭೂಮಿ ಮೇಲೆ ದಾಳಿ ಮಾಡುವ ಉದ್ದೇಶ ಹೊಂದಿದ್ದರು ಎಂದು ಲೇಖನ ಹೇಳಿತ್ತು. ಈ ಸುದ್ದಿಯ ಹಿನ್ನೆಲೆಯಲ್ಲಿ ಒಬಾಮಾ ಮೇಲಿನ ಹೇಳಿಕೆ ನೀಡಿದ್ದಾರೆ ಎಂದು ಲೇಖನದಲ್ಲಿ ಉಲ್ಲೇಖವಿತ್ತು. ಆದರೆ ಒಬಾಮಾ ಅಂಥ ಹೇಳಿಕೆಯನ್ನೇ ನೀಡಿಲ್ಲ ಎನ್ನುವುದು indiatoday.in ನಡೆಸಿದ ಸತ್ಯಶೋಧದಿಂದ ತಿಳಿದುಬಂದಿದೆ.

ಜತೆಗೆ ಎನ್‍ಐಎ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ, ಶಂಕಿತ ಉಗ್ರರು ರಾಮಜನ್ಮಭೂಮಿ ಮೇಲೆ ದಾಳಿ ಮಾಡಲು ಉದ್ದೇಶಿಸಿದ್ದರು ಎಂದು ಹೇಳಿಲ್ಲ. ಈ ಲೇಖನದ ಫೇಸ್‍ಬುಕ್ ಪೋಸ್ಟ್ ಅನ್ನು ಈಗಾಗಲೇ 5500 ಬಾರಿ ಶೇರ್ ಮಾಡಲಾಗಿದೆ.

ಹಲವು ವಿದೇಶಿ ಸುದ್ದಿಜಾಲಗಳೂ ಸೇರಿದಂತೆ ಹಲವೆಡೆ ಈ ಬಗ್ಗೆ ಹುಡುಕಾಟ ನಡೆಸಿದರೂ, ಎನ್‍ಐಎ ದಾಳಿ ಬಳಿಕ ಒಬಾಮಾ ಮೋದಿ ಬಗ್ಗೆ ಮಾತನಾಡಿದ ಉಲ್ಲೇಖವಿಲ್ಲ.

ಓರಿಯಂಟಲ್ ಟೈಮ್ಸ್ ಆಫ್ ಇಂಡಿಯಾ ಸಂಪಾದಕ ಅಭಿಷೇಕ್ ವರ್ಮಾ ಅವರನ್ನು ಸಂಪರ್ಕಿಸಿದಾಗ, ಕಣ್ತಪ್ಪಿನಿಂದ ಈ ಲೇಖನ ಪ್ರಕಟಿಸಲಾಗಿದ್ದು, ಅದನ್ನು ಎಲ್ಲ ಪ್ಲಾಟ್‍ ಫಾರಂಗಳಿಂದ ಕಿತ್ತುಹಾಕಲಾಗಿದೆ ಎಂಬ ಸಮಜಾಯಿಷಿ ನೀಡಿದ್ದಾರೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News