ಬಾಂಗ್ಲಾದೇಶ ಚುನಾವಣೆ: ಭರ್ಜರಿ ಜಯ ಗಳಿಸಿ ಸಂಸದನಾದ ಪ್ರಸಿದ್ಧ ಕ್ರಿಕೆಟಿಗ

Update: 2018-12-31 15:04 GMT

ಢಾಕಾ, ಡಿ.31: ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕ ಮುಷ್ರಫ್ ಮೊರ್ತಾಝಾ ಅವರು ರವಿವಾರ ನಡೆದ ಬಾಂಗ್ಲಾದೇಶ ಸಂಸದೀಯ ಚುನಾವಣೆಯಲ್ಲಿ ನರೈಲ್-2 ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ.

ಅವಾಮಿ ಲೀಗ್ ಟಿಕೆಟ್‍ನಲ್ಲಿ ಮೊರ್ತಾಝಾ ಸ್ಪರ್ಧಿಸಿದ್ದರು. ಬಾಂಗ್ಲಾದೇಶ ಪಾರ್ಲಿಮೆಂಟಿನ 300 ಸ್ಥಾನಗಳ ಪೈಕಿ ಅವಾಮಿ ಲೀಗ್ 288 ಸ್ಥಾನಗಳನ್ನು ಗೆದ್ದುಕೊಂಡಿದೆ. ಮೊರ್ತಾಝಾ 2,74,418 ಮತಗಳನ್ನು ಗಳಿಸಿದ್ದರೆ, ಅವರ ಪ್ರತಿಸ್ಪರ್ಧಿ ಕೇವಲ 8,006 ಮತಗಳನ್ನು ಗಳಿಸಿದ್ದರು.

ಬಾಂಗ್ಲಾ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿರುವ ಮೊರ್ತಾಝಾ ಬಲಗೈ ಮಧ್ಯಮ ವೇಗದ ಬೌಲರ್. ವೆಸ್ಟ್‍ಇಂಡೀಸ್ ವಿರುದ್ಧದ ಸರಣಿಗೆ ಮುನ್ನ ಅವರು ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದರು ಹಾಗೂ 2019ರ ವಿಶ್ವಕಪ್ ಬಳಿಕ ನಿವೃತ್ತರಾಗುವ ಸುಳಿವು ನೀಡಿದ್ದರು. ವೆಸ್ಟ್‍ಇಂಡೀಸ್ ವಿರುದ್ಧದ ಸರಣಿ ಅವರ ಕೊನೆಯ ಅಂತಾರಾಷ್ಟ್ರೀಯ ಟೂರ್ನಿಯಾಗುವ ಸಾಧ್ಯತೆ ಇದೆ.

"ನನಗೆ ರಾಜಕೀಯ ಸೆಳೆತ ಸದಾ ಇದೆ. ರಾಜಕೀಯದ ಹೊರತಾಗಿ ನಮ್ಮ ದೇಶದಲ್ಲಿ ಅಭಿವೃದ್ಧಿ ಅಸಾಧ್ಯ ಎನ್ನುವುದು ನನ್ನ ಬಲವಾದ ನಂಬಿಕೆ...ಇದೀಗ ದೇಶಕ್ಕಾಗಿ ಏನಾದರೂ ಮಾಡುವ ಅವಕಾಶ ಸಿಕ್ಕಿದೆ. 2019ರ ವಿಶ್ವಕಪ್ ಬಳಿಕ ನನಗೆ ಏನು ಕಾದಿದೆಯೋ ಗೊತ್ತಿಲ್ಲ" ಎಂದು ಫೇಸ್ಬುಕ್ ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News