ಉತ್ತರ ಪ್ರದೇಶದಲ್ಲಿ ಗೋ ಕಲ್ಯಾಣಕ್ಕಾಗಿ ಮದ್ಯದ ಮೇಲೆ ಸೆಸ್!

Update: 2019-01-02 03:59 GMT

ಲಕ್ನೋ, ಜ.2: ಉತ್ತರ ಪ್ರದೇಶದಲ್ಲಿ ಗೋ ಕಲ್ಯಾಣಕ್ಕಾಗಿ ಮದ್ಯ ಸೇರಿದಂತೆ ಎಲ್ಲ ಅಬಕಾರಿ ಉತ್ಪನ್ನಗಳ ಮೇಲೆ ಶೇಕಡ 0.5ರಷ್ಟು ಸೆಸ್ ವಿಧಿಸಲು ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ವಾರದಿಂದಲೇ ಇದು ಜಾರಿಗೆ ಬರಲಿದ್ದು, ಇದರಿಂದಾಗಿ ಉತ್ತರ ಪ್ರದೇಶದಲ್ಲಿ ಮದ್ಯ ದುಬಾರಿಯಾಗಲಿದೆ.

ಈಗಾಗಲೇ ಗೋ ಸಂರಕ್ಷಣೆ ಹೆಸರಿನಲ್ಲಿ ಟೋಲ್ ತೆರಿಗೆ ವಿಧಿಸಲಾಗುತ್ತಿದ್ದು, ಹಲವು ಸರ್ಕಾರಿ ಮೂಲಸೌಕರ್ಯ ಉದ್ದಿಮೆಗಳು ರಾಜ್ಯಾದ್ಯಂತ ಗೋಶಾಲೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ನೆರವು ನೀಡುತ್ತಿವೆ.

ಮದ್ಯದ ಮೇಲೆ ಸೆಸ್ ವಿಧಿಸುವ ಪ್ರಸ್ತಾವವನ್ನು ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಂಗೀಕರಿಸಲಾಗಿದೆ. ರಾಜ್ಯದಲ್ಲಿ ಬಿಡಾಡಿ ಹಸುಗಳ ಕಾಟದಿಂದ ರೋಸಿಹೋದ ಜನ ಶಾಲೆ ಹಾಗೂ ಪೊಲೀಸ್ ಠಾಣೆಗಳಲ್ಲಿ ಇವುಗಳನ್ನು ಕೂಡಿ ಹಾಕಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಡಾಡಿ ಹಸುಗಳಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ರಾಜ್ಯದಲ್ಲಿ ಅನಧಿಕೃತ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿದ ಬಳಿಕ ಬಿಡಾಡಿ ಹಸುಗಳ ಸಮಸ್ಯೆ ಹೆಚ್ಚಿದೆ. ಗೋಕಳ್ಳತನ, ಸಾಗಣೆ ಮತ್ತು ಗೋಮಾಂಸ ಭಕ್ಷಣೆಯ ಆರೋಪದಲ್ಲಿ ಗೋರಕ್ಷಕರು ಹಲವು ಮಂದಿಯನ್ನು ಹತ್ಯೆ ಮಾಡಿರುವ ಪ್ರಕರಣಗಳೂ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಮುದಿ ಹಸುಗಳನ್ನು ರೈತರು ಬೀದಿಗೆ ಬಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬಿಡಾಡಿ ಹಸುಗಳು ಕೃಷಿಭೂಮಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿದ್ದು, ಗ್ರಾಮೀಣ ರೈತರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಸ್ತೆಬದಿಯ ಹಸುಗಳು ಹಲವು ಅಪಘಾತಗಳಿಗೂ ಕಾರಣವಾಗುತ್ತಿವೆ.

ರಾಜ್ಯದಲ್ಲಿ ಈಗಾಗಲೇ ಗೋಕಲ್ಯಾಣಕ್ಕೆ ಟೋಲ್ ತೆರಿಗೆಯ ಮೇಲೆ ಶೇಕಡ 0.5ರಷ್ಟು ಸೆಸ್ ವಿಧಿಸಲಾಗುತ್ತಿದೆ. ಮಂಡಿ ಪರಿಷತ್‌ಗಳು ತಮ್ಮ ಆದಾಯದ ಶೇಕಡ 1ನ್ನು ಗೋಸುರಕ್ಷಾ ನಿಧಿಗೆ ದೇಣಿಗೆ ನೀಡುತ್ತಿದ್ದು, ಇದನ್ನು ಶೇಕಡ 2ಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ. ರಾಜಸ್ಥಾನ ಹಾಗೂ ಪಂಜಾಬ್‌ಗಳಲ್ಲಿ ಕೂಡಾ ಬಿಜೆಪಿ ಆಡಳಿತದಲ್ಲಿದ್ದಾಗ ಗೋ ಕಲ್ಯಾಣ ಸೆಸ್ ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News