6 ಮಿಸ್ ಕಾಲ್ ಗಳಿಗೆ 1.86 ಕೋಟಿ ರೂ. ಕಳಕೊಂಡ ಉದ್ಯಮಿ !

Update: 2019-01-02 17:03 GMT

ಮುಂಬೈ, ಜ.2: ನೀವು ತಮಿಳು ಚಿತ್ರ ‘ಇರುಂಬುತಿರೈ’ಯನ್ನು ನೋಡಿದರೆ ಸೈಬರ್ ವಂಚನೆಯ ಬಗ್ಗೆ ಒಂದು ಕ್ಷಣ ಬೆಚ್ಚಿಬಿದ್ದಿರಬಹುದು. ಮಾಹಿತಿಗಳೇ ಸಂಪತ್ತು ಎನ್ನುವ ವಿಲನ್ ಪಾತ್ರಧಾರಿ ಜನಸಾಮಾನ್ಯರ ಹಣವನ್ನು ಹೇಗೆ ಲೂಟಿ ಮಾಡುತ್ತಾನೆ ಎನ್ನುವ ಬಗ್ಗೆ ತೋರಿಸಿರುವ ಈ ಚಿತ್ರದಲ್ಲಿ ಡಿಜಿಟಲ್ ವಂಚನೆಯ ಬಗ್ಗೆ ವಿವರಿಸಲಾಗಿದೆ. ಆದರೆ ಮುಂಬೈಯಲ್ಲಿ ನಡೆದಿರುವ ಈ ವಂಚನೆ ‘ಇರುಂಬುತ್ತಿರೈ’ಗಿಂತಲೂ ಭಯಾನಕವಾಗಿದೆ. ಅತೀ ಸುಲಭವಾಗಿ ವಂಚಕರು ನಮ್ಮ ಖಾತೆಯಲ್ಲಿರುವ ಹಣವನ್ನು ಹೇಗೆ ದೋಚುತ್ತಾರೆ ಎನ್ನುವುದಕ್ಕೆ ಈ ಸುದ್ದಿ ಅತ್ಯುತ್ತಮ ಉದಾಹರಣೆ.

ಇಲ್ಲಿನ ಮಹೀಮ್ ನ ಉದ್ಯಮಿಯಾಗಿರುವ ವಿ. ಶಾ ಅವರ ಮೊಬೈಲ್ ಗೆ ಡಿ.27-28ರ ನಡುವೆ ಅಂದರೆ ರಾತ್ರಿ 2 ಗಂಟೆ ಸುಮಾರಿಗೆ 6 ಮಿಸ್ ಕಾಲ್ ಗಳು ಬಂದಿತ್ತು. ಅದರಲ್ಲಿ ಒಂದು ಕರೆಯ ಡಯಲಿಂಗ್ ಕೋಡ್ ಬ್ರಿಟನ್ ನದ್ದಾಗಿತ್ತು (+44). ಬೆಳಗ್ಗೆ ಈ ಕರೆಗಳನ್ನು ನೋಡಿದ ಶಾ ಆ ಸಂಖ್ಯೆಗಳಿಗೆ ಕರೆ ಮಾಡಿದ್ದಾರೆ. ಆದರೆ ಅವರ ಸಿಮ್ ಡಿ ಆ್ಯಕ್ಟಿವೇಟ್ ಆದ ಬಗ್ಗೆ ತಿಳಿದು ಅವರು ಆಘಾತಕ್ಕೊಳಗಾಗಿದ್ದರು. ಕೂಡಲೇ ಸಿಮ್ ಸರ್ವಿಸ್ ಪ್ರೊವೈಡರ್ ಗೆ ಕರೆ ಮಾಡಿದಾಗ ಶಾ ಅವರ ಮನವಿಯ ಮೇರೆಗೆ ಸಿಮ್ ಡಿ ಆ್ಯಕ್ಟಿವೇಟ್ ಮಾಡಲಾಗಿದೆ ಎನ್ನುವ ಮಾಹಿತಿ ಲಭಿಸಿತು. ಇದರಿಂದ ಸಂಶಯಗೊಂಡ ಶಾ ಬ್ಯಾಂಕ್ ಗೆ ಭೇಟಿ ನೀಡಿ ತನ್ನ ಖಾತೆಯಲ್ಲಿರುವ ಮೊತ್ತದ ಬಗ್ಗೆ ವಿಚಾರಿಸಿದರು.

ಬ್ಯಾಂಕ್ ಸಿಬ್ಬಂದಿ ಹೇಳಿದ ಮಾಹಿತಿ ಕೇಳಿದ ಶಾ ಅವರಿಗೆ ಒಂದು ಕ್ಷಣ ಸಿಡಿಲು ಬಡಿದಂತಾಗಿತ್ತು. ಅವರ ಕಂಪೆನಿಯ ಖಾತೆಯಲ್ಲಿದ್ದ 1.86 ಕೋಟಿ ರೂ.ಗಳನ್ನು ವಂಚಕರು ದೋಚಿದ್ದರು. 28 ಟ್ರಾನ್ಸಾಕ್ಷನ್ ಗಳ ಮೂಲಕ 14 ಖಾತೆಗಳಿಗೆ ಅವರ ಹಣವನ್ನು ವರ್ಗಾಯಿಸಲಾಗಿತ್ತು. ಬ್ಯಾಂಕ್ ತನ್ನಿಂದಾದ ಪ್ರಯತ್ನ ನಡೆಸಿ 20 ಲಕ್ಷ ರೂ,ಗಳನ್ನು ವಾಪಸ್ ಪಡೆಯುವಂತಾಯಿತು. ಆದರೆ ಉಳಿದ ಹಣ ವಂಚಕರ ಪಾಲಾಗಿದೆ.

ಡಿಸೆಂಬರ್ 27ರಂದು 11:15ಕ್ಕೆ ಸಿಮ್ ಕಾರ್ಡ್ ರಿಪ್ಲೇಸ್ ಮೆಂಟ್ ಗೆ ಮನವಿ ಮಾಡಲಾಗಿದ್ದು, ಅಂದು ರಾತ್ರಿ 2 ಗಂಟೆಗೆ ಮಿಸ್ ಕಾಲ್ ಗಳು ಬಂದಿದ್ದವು.

“ನನ್ನ ಕಂಪೆನಿಯ ಬ್ಯಾಂಕ್ ಖಾತೆ ನನ್ನ ಮೊಬೈಲ್ ಫೋನ್ ನೊಂದಿಗೆ ಲಿಂಕ್ ಆಗಿದೆ. ಆದರೆ ನನ್ನ ಖಾತೆಯನ್ನು ಇಷ್ಟು ಸುಲಭವಾಗಿ ಬರಿದು ಮಾಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ” ಎಂದು ಶಾ ಹೇಳುತ್ತಾರೆ.

ಈ ಬಗ್ಗೆ ಬಿಕೆಸಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. “ಶಾ ಅವರ ಯುನಿಕ್ ಸಿಮ್ ನಂಬರ್ ಪಡೆದ ವಂಚಕರು ನಂತರ ‘ಸ್ವಿಮ್ ಸ್ವಾಪ್’ ನಡೆಸಿದ್ದಾರೆ. ಶಾ ಅವರಿಗೆ ಯಾವುದೇ ಸಂಶಯ ಬಂದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ತಡರಾತ್ರಿ ಕರೆ ಮಾಡಿದ್ದಾರೆ ಎಂದು ನಾವು ಸಂಶಯಿಸುತ್ತೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹ್ಯಾಕಿಂಗ್ ಮೂಲಕ ದುಷ್ಕರ್ಮಿಗಳು ಯುನಿಕ್ ಸಿಮ್ ನಂಬರನ್ನು ಪಡೆಯುತ್ತಾರೆ. ಆದರೆ ತಾನು ಯಾರಿಗೂ ಯುನಿಕ್ ಸಿಮ್ ನಂಬರ್ ತಿಳಿಸಿಲ್ಲ ಹಾಗು ಯಾರೊಬ್ಬರೂ ಇದನ್ನು ವಿಚಾರಿಸಿ ತನಗೆ ಕರೆ ಮಾಡಿಲ್ಲ ಎನ್ನುವುದನ್ನು ಶಾ ಸ್ಪಷ್ಟಪಡಿಸುತ್ತಾರೆ.

“ಯಾವುದಾದರೂ ನಕಲಿ ಆ್ಯಪ್ ಅಥವಾ ಇಮೇಲ್ ಮೂಲಕ ವಂಚಕರು ಶಾ ಅವರ ಮಾಹಿತಿ ಪಡೆದಿರಬಹುದು. ಅಸುರಕ್ಷಿತ ವೆಬ್ ಕನೆಕ್ಷನ್ ಗಳನ್ನು ನೀವು ಬ್ರೌಸ್ ಮಾಡಿದ ಪ್ರತಿಯೊಂದು ಬಾರಿಯೂ ವಂಚಕರು ನಿಮ್ಮೆಲ್ಲಾ ಡಾಟಾಗಳನ್ನು ಪಡೆಯುತ್ತಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News