ಪಾಕ್ ರಾಯಭಾರ ಕಚೇರಿಯಲ್ಲಿದ್ದ 23 ಭಾರತೀಯರ ಪಾಸ್‌ಪೋರ್ಟ್ ನಾಪತ್ತೆ

Update: 2019-01-02 17:31 GMT

ಹೊಸದಿಲ್ಲಿ, ಜ.2: 23 ಭಾರತೀಯರ ಪಾಸ್‌ಪೋರ್ಟ್‌ಗಳು ಸಿಗುತ್ತಿಲ್ಲ ಎಂದು ಪಾಕ್ ರಾಯಭಾರ ಕಚೇರಿ ಮಾಹಿತಿ ನೀಡಿದ್ದು, ಇವನ್ನು ‘ಕಳೆದು ಹೋದ’ ಪಾಸ್‌ಪೋರ್ಟ್ ಎಂದು ಘೋಷಿಸಲಾಗಿದೆ ಎಂದು ಸರಕಾರ ತಿಳಿಸಿದೆ.

ಪಾಕಿಸ್ತಾನ ದೇಶಕ್ಕೆ ತೆರಳಲು ವೀಸಾ ಪಡೆಯುವ ಉದ್ದೇಶದಿಂದ ಇವರು ದಿಲ್ಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಗೆ ಅರ್ಜಿ, ಪಾಸ್‌ಪೋರ್ಟ್ ಮತ್ತು ಇತರ ದಾಖಲೆ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ 23 ಮಂದಿಯ ಪಾಸ್‌ಪೋರ್ಟ್‌ಗಳು ಸಿಗುತ್ತಿಲ್ಲ ಎಂದು ವಿದೇಶ ವ್ಯವಹಾರ ಇಲಾಖೆಗೆ ಪಾಕ್ ರಾಯಭಾರ ಕಚೇರಿ ಮಾಹಿತಿ ನೀಡಿರುವುದಾಗಿ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಈ ಪಾಸ್‌ಪೋರ್ಟ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ‘ಕಳೆದುಹೋದ’ ಪಾಸ್‌ಪೋರ್ಟ್ ಎಂದು ಘೋಷಿಸಲಾಗಿದೆ. ಈ ಪಾಸ್‌ಪೋರ್ಟ್‌ಗಳ ಬಗ್ಗೆ ಜಾಗರೂಕತೆ ವಹಿಸುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ ಮತ್ತು ಪಾಸ್‌ಪೋರ್ಟ್ ಕಳೆದುಕೊಂಡವರಿಗೆ ಹೊಸ ಪಾಸ್‌ಪೋರ್ಟ್ ಒದಗಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸಚಿವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. ಪಾಸ್‌ಪೋರ್ಟ್ ಕಳೆದುಕೊಂಡವರು ಸಿಖ್ ಸಮುದಾಯದವರಾಗಿದ್ದಾರೆ. ಪಾಕಿಸ್ತಾನದ ಕರ್ತಾರ್‌ಪುರ ಸೇರಿದಂತೆ ಅಲ್ಲಿನ ಗುರುದ್ವಾರಕ್ಕೆ ಭೇಟಿ ನೀಡುವ ಉದ್ದೇಶದಿಂದ ಇವರು ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News