ರೋನಿತ್ ದಾಳಿಗೆ ನಡುಗಿದ ಛತ್ತೀಸ್‌ಗಡ: ಕರ್ನಾಟಕಕ್ಕೆ 198 ರನ್ ಗಳ ಭರ್ಜರಿ ಜಯ
► ನಾಯಕ ಪಾಂಡೆ ಅಜೇಯ ಶತಕ
► 9 ವಿಕೆಟ್ ಪಡೆದ ಮೋರೆಗೆ ಪಂದ್ಯಶ್ರೇಷ್ಠ ಗೌರವ
ಆಲೂರು, ಜ.2: ಮನೀಷ್ ಪಾಂಡೆ ಬಳಗ ಕರುನಾಡ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸಲಿಲ್ಲ. ಚಳಿಯ ವಾತಾವರಣದಲ್ಲೂ ಛತ್ತೀಸ್‌ಗಡಕ್ಕೆ ರೋನಿತ್ ಮೋರೆ ಹಾಗೂ ಶ್ರೇಯಸ್ ಗೋಪಾಲ್ ಬಿಸಿಗಾಳಿಯಾಗಿ ಪರಿಣಮಿಸಿದರು. ಪಾಂಡೆ ಅಜೇಯ ಶತಕ ಬಾರಿಸಿ ನಾಯಕತ್ವಕ್ಕೆ ತಕ್ಕ ಆಟವಾಡಿದರು. ಅಂತಿಮವಾಗಿ ಕರ್ನಾಟಕ ತಂಡ ಛತ್ತೀಸ್‌ಗಡ ವಿರುದ್ಧದ ಪಂದ್ಯದಲ್ಲಿ 198 ರನ್‌ಗಳ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಈ ಗೆಲುವಿನಿಂದ 6 ಅಂಕ ಗಳಿಸಿರುವ ಕರ್ನಾಟಕ, ‘ಎ’ ಗುಂಪಿನ 7 ಪಂದ್ಯಗಳಲ್ಲಿ ಒಟ್ಟು 27 ಅಂಕ ಗಳಿಸಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕರ್ನಾಟಕ ತಲಾ 3ರಲ್ಲಿ ಜಯ, ಡ್ರಾ ಹಾಗೂ 1ರಲ್ಲಿ ಸೋತಿದೆ.
ಇಲ್ಲಿ ನಡೆದ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದ 2ನೇ ಇನಿಂಗ್ಸ್ ನಲ್ಲಿ ಮಂಗಳವಾರ 113 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಬುಧವಾರ ತನ್ನ ನಾಲ್ಕನೇ ದಿನದಾಟ ಆರಂಭಿಸಿತು. 57 ರನ್‌ಗಳಿಸಿ ಅಜೇಯರಾಗುಳಿದಿದ್ದ ನಾಯಕ ಪಾಂಡೆ ಈ ದಿನ ಭರ್ಜರಿ ಶತಕ (ಅಜೇಯ 102) ಗಳಿಸಿದರು. ಆದರೆ ಶ್ರೇಯಸ್ ಗೋಪಾಲ್ ಮಂಗಳವಾರದ ಮೊತ್ತಕ್ಕೆ ಕೇವಲ 1ರನ್(22) ಸೇರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಕೆ.ಗೌತಮ್ (20) ಹಾಗೂ ವಿನಯ್(7)ಅವರು ಪಾಂಡೆಗೆ ಅಲ್ಪ ಸಾಥ್ ನೀಡಿದರು. ಇವರಿಬ್ಬರ ವಿಕೆಟ್ ಪತನದ ನಂತರ ಬಂದ ಬೌಲರ್ ಮಿಥುನ್ ಅಕ್ಷರಶಃ ಅಬ್ಬರಿಸಿದರು. ಟಿ20 ಪಂದ್ಯದ ರೀತಿಯಲ್ಲಿ ಬ್ಯಾಟ್ ಬೀಸಿದ ಅವರು, 17 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 33 ರನ್ ಕಲೆ ಹಾಕಿದರು. ಛತ್ತೀಸ್‌ಗಡ ತಂಡಕ್ಕೆ ಶೀಘ್ರ ಬ್ಯಾಟಿಂಗ್ ನೀಡಿ ಆಲೌಟ್ ಮಾಡುವ ಉದ್ದೇಶದಿಂದ ಕರ್ನಾಟಕ 7 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿದ ವೇಳೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಛತ್ತೀಸ್‌ಗಡ ಪರ ಪಂಕಜ್‌ಕುಮಾರ್ 4 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿದರು. 355 ರನ್‌ಗಳ ಗೆಲುವಿನ ಗುರಿ ಬೆಂಬತ್ತಿದ ಪ್ರವಾಸಿ ಬಳಗಕ್ಕೆ ವೇಗಿ ಮೋರೆ(35ಕ್ಕೆ4) ಹಾಗೂ ಸ್ಪಿನ್ನರ್ ಗೋಪಾಲ್(44ಕ್ಕೆ4) ತಲಾ 4 ವಿಕೆಟ್ ಪಡೆದು ಮರ್ಮಾಘಾತ ನೀಡಿದರು. ಛತ್ತೀಸ್‌ಗಡದ ಆರಂಭಿಕ ದಾಂಡಿಗ ಧಲಿವಾಲ್ ಅರ್ಧಶತಕ (61) ಹಾಗೂ ಅಮನ್‌ದೀಪ್ ಖರೆ(35) ಉತ್ತಮ ಮೊತ್ತ ದಾಖಲಿಸಿ ಪಂದ್ಯವನ್ನು ಡ್ರಾಗೊಳಿಸುವ ಯತ್ನ ಮಾಡಿದರಾದರೂ ಪಾಂಡೆ ಪಡೆ ಅದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಛತ್ತೀಸ್‌ಗಡ ತಂಡ 156 ರನ್ ಗಳಿಸಿ ಗಂಟುಮೂಟೆ ಕಟ್ಟಿತು. ಎರಡೂ ಇನಿಂಗ್ಸ್ ಸೇರಿ 9 ವಿಕೆಟ್ ಉರುಳಿಸಿದ ಮೋರೆಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವ ಒಲಿಯಿತು.