ತ್ರಿವಳಿ ತಲಾಕ್ ಮಸೂದೆ ವಿರೋಧಿಸಿದ ಜೆಡಿಯು: ಹೆಚ್ಚಿದ ಬಿಜೆಪಿಯ ತಲೆನೋವು

Update: 2019-01-03 17:46 GMT

ಹೊಸದಿಲ್ಲಿ,ಜ.3: ರಫೇಲ್ ಒಪ್ಪಂದದ ಕುರಿತು ಜೆಪಿಸಿ ತನಿಖೆಯ ಬೇಡಿಕೆಯನ್ನು ಎನ್‌ಡಿಎ ಪಾಲುದಾರ ಹಾಗೂ ಬಿಜೆಪಿಯ ದೀರ್ಘಕಾಲಿಕ ಮಿತ್ರಪಕ್ಷ ಶಿವಸೇನೆಯು ಬೆಂಬಲಿಸಿದ ಬಳಿಕ ಇದೀಗ ಇನ್ನೊಂದು ಮಿತ್ರಪಕ್ಷ ಜೆಡಿಯು ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆಯು ಅಂಗೀಕಾರಕ್ಕೆ ಮಂಡನೆಗೊಂಡರೆ ತಾನು ಸರಕಾರದ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿದೆ. ಇದು ಬಿಜೆಪಿಯ ತಲೆನೋವನ್ನು ಇನ್ನಷ್ಟು ಹೆಚ್ಚಿಸಿದೆ.

ಮಸೂದೆಯನ್ನು ಟೀಕಿಸಿರುವ ಜೆಡಿಯು,ಅದಕ್ಕಾಗಿ ಅವಸರಿಸಲಾಗುತ್ತಿದೆ ಎಂದು ಹೇಳಿದೆ. ಮಸೂದೆಯು ಮುಸ್ಲಿಂ ವಿರೋಧಿಯಾಗಿದೆಯೆಂದು ಆರೋಪಿಸಿರುವ ಪ್ರತಿಪಕ್ಷಗಳು ಪರಿಶೀಲನೆಗಾಗಿ ಅದನ್ನು ಆಯ್ಕೆ ಸಮಿತಿಗೆ ಒಪ್ಪಿಸುವಂತೆ ಪಟ್ಟು ಹಿಡಿದಿವೆ.

ಮಸೂದೆಯ ಅಂಗೀಕಾರಕ್ಕೆ ಅವಸರಿಸಲಾಗುತ್ತಿದೆ ಎನ್ನುವುದು ಪಕ್ಷದ ಅಭಿಪ್ರಾಯವಾಗಿದೆ. ಅದನ್ನು ನಿವಾರಿಸಬಹುದಿತ್ತು, ಹೆಚ್ಚಿನ ಸಮಾಲೋಚನೆ ಅಗತ್ಯವಿದೆ ಎಂದು ನಾವು ಭಾವಿಸಿದ್ದೇವೆ ಎಂದು ಹಿರಿಯ ಜೆಡಿಯು ನಾಯಕ ವಶಿಷ್ಟ ನಾರಾಯಣ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು. ಮಸೂದೆಯು ಮತದಾನಕ್ಕೆ ಬಂದಾಗ ನಾವು ಸರಕಾರದ ವಿರುದ್ಧ ಮತ ಚಲಾಯಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಜೆಡಿಯುದ ಈ ಹೆೇಳಿಕೆ ಬಿಜೆಪಿಗೆ ಪಥ್ಯವಾಗಿಲ್ಲ.

ತ್ರಿವಳಿ ತಲಾಕ್ ಕುರಿತಂತೆ ವೋಟ್ ಬ್ಯಾಂಕ್ ರಾಜಕೀಯ ನಡೆಯುತ್ತಿದೆ. ತ್ರಿವಳಿ ತಲಾಕ್ ಮಸೂದೆಯನ್ನು ಬೆಂಬಲಿಸಿದರೆ ತಾವು ನಿರ್ದಿಷ್ಟ ಸಮುದಾಯವೊಂದರ ಮತಗಳನ್ನು ಕಳೆದುಕೊಳ್ಳುತ್ತೇವೆ ಎಂದು ಕೆಲವು ಪಕ್ಷಗಳು ಭಾವಿಸಿವೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಬಿಹಾರದ ನಾಯಕ ಸಿ.ಪಿ.ಠಾಕೂರ್ ಅವರು ಯಾವುದೇ ಪಕ್ಷವನ್ನು ಹೆಸರಿಸದೆ ಹೇಳಿದರು.

ತ್ರಿವಳಿ ತಲಾಕ್ ಪ್ರಕರಣದಲ್ಲಿ ಪತಿಗೆ ಮೂರು ವರ್ಷಗಳ ಶಿಕ್ಷೆಯನ್ನು ವಿಧಿಸುವ ಮಸೂದೆಯಲ್ಲಿನ ನಿಯಮದ ಬಗ್ಗೆ ಜಿಡಿಯುಗೆ ಆಕ್ಷೇಪವಿದೆ ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News