ಹಿಂದೂಗಳ ‘ಪಂಜ್ ತೀರಥ್’ ರಾಷ್ಟ್ರೀಯ ಪಾರಂಪರಿಕ ತಾಣ: ಪಾಕಿಸ್ತಾನ ಘೋಷಣೆ

Update: 2019-01-03 18:03 GMT

ಪೇಶಾವರ, ಜ. 3: ಪೇಶಾವರದಲ್ಲಿರುವ ಪ್ರಾಚೀನ ಹಿಂದೂಗಳ ಧಾರ್ಮಿಕ ಸ್ಥಳವಾದ ‘ಪಂಜ್ ತೀರಥ್’ ಅನ್ನು ರಾಷ್ಟ್ರೀಯ ಪಾರಂಪರಿಕ ತಾಣವಾಗಿ ವಾಯುವ್ಯ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯ ಸರಕಾರ ಘೋಷಿಸಿದೆ.

ಐದು ಕೊಳಗಳ ಕಾರಣಕ್ಕಾಗಿ ಈ ಸ್ಥಳಕ್ಕೆ ‘ಪಂಜ್ ತೀರಥ್’ ಎಂಬ ಹೆಸರು ಬಂದಿದೆ. ಈ ಸ್ಥಳ ದೇವಾಲಯ ಹಾಗೂ ಖರ್ಜೂರ ಮರಗಳಿರುವ ಹುಲ್ಲುಗಾವಲನ್ನು ಒಳಗೊಂಡಿದೆ. ಐದು ಕೊಳಗಳಿರುವ ಈ ಪಾರಂಪರಿಕ ನಿವೇಶನ ಈಗ ಚಾಚಾ ಯೂನುಸ್ ಪಾರ್ಕ್ ಹಾಗೂ ಖೈಬರ್ ಪಖ್ತುಂಖ್ವಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಡಿಯಲ್ಲಿ ಬರುತ್ತದೆ. ‘ಪಂಜ್ ತೀರಥ್’ ಪಾರ್ಕ್‌ನಲ್ಲಿರುವ ಭೂಮಿ ಪಾರಂಪರಿಕ ನಿವೇಶನ ಎಂದು ಖೈಬರ್‌ಪಖ್ತುಂಖ್ವಾ ಪ್ರಾಚೀನತೆಗಳ ಕಾಯ್ದೆ 2016ರ ಅನ್ವಯ ಘೋಷಿಸಿ ಪುರಾತತ್ವ ಹಾಗೂ ವಸ್ತುಸಂಗ್ರಹಾಲಯದ ಖೈಬರ್ ಪಖ್ತುಂಖ್ವಾ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದೆ. ಮಹಾಭಾರತದ ಪೌರಾಣಿಕ ದೊರೆ ಪಾಂಡುಗೆ ಸೇರಿದ ಪ್ರದೇಶ ಇದಾಗಿದೆ ಎನ್ನುವ ನಂಬಿಕೆ ಇದೆ. ಹಿಂದೂಗಳು ಕಾರ್ತಿಕ ಮಾಸದಲ್ಲಿ ಸ್ನಾನ ಮಾಡಲು ಈ ಕೊಳ ಬಳಸುತ್ತಿದ್ದರು ಹಾಗೂ ಎರಡು ದಿನಗಳ ಕಾಲ ಮರಗಳ ಅಡಿಯಲ್ಲಿ ಆರಾಧನೆ ನಡೆಸುತ್ತಿದ್ದರು ಎಂದು ನಂಬಲಾಗಿದೆ.

1747ರಲ್ಲಿ ಅಫ್ಘಾನ್‌ನ ದುರ್ರಾನಿ ರಾಜವಂಶದ ಆಳ್ವಿಕೆ ಸಂದರ್ಭ ಈ ನಿವೇಶನಕ್ಕೆ ಹಾನಿ ಉಂಟಾಗಿತ್ತು. ಆದಾಗ್ಯೂ, 1834ರಲ್ಲಿ ಸಿಖ್ಖ್ ಆಡಳಿತದ ಅವಧಿಯಲ್ಲಿ ಸ್ಥಳೀಯ ಹಿಂದೂಗಳು ಇದನ್ನು ಮರು ರೂಪಿಸಿದ್ದರು ಹಾಗೂ ಮತ್ತೆ ಆರಾಧಿಸಲು ಆರಂಭಿಸಿದ್ದರು. ಈ ಚಾರಿತ್ರಿಕ ನಿವೇಶನಕ್ಕೆ ಹಾನಿ ಉಂಟು ಮಾಡುವವರಿಗೆ 5 ವರ್ಷ ಜೈಲು ಹಾಗೂ 2 ದಶಲಕ್ಷ ದಂಡ ವಿಧಿಸುವುದಾಗಿ ಸರಕಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News