×
Ad

ಹಾಪ್‌ಮನ್ ಕಪ್: ಮೂರನೇ ಸಿಂಗಲ್ಸ್ ಪಂದ್ಯ ಜಯಿಸಿದ ಸೆರೆನಾ

Update: 2019-01-03 23:40 IST

ಪರ್ತ್,ಜ.3: ಬ್ರಿಟನ್‌ನ ಕಾಟಿ ಬೌಲ್ಟರ್ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿರುವ ಸೆರೆನಾ ವಿಲಿಯಮ್ಸ್ ಹಾಪ್‌ಮನ್ ಕಪ್ ಅಭಿಯಾನದ ಸಿಂಗಲ್ಸ್ ವಿಭಾಗದಲ್ಲಿ ಅಜೇಯ ದಾಖಲೆ ಕಾಯ್ದುಕೊಂಡರು. ಈ ಮೂಲಕ ಮುಂಬರುವ ಆಸ್ಟ್ರೇಲಿಯನ್ ಓಪನ್‌ಗೆ ಉತ್ತಮ ಸಿದ್ಧತೆ ನಡೆಸಿದರು.

ಸೆರೆನಾ ‘ಬಿ’ ಗುಂಪಿನ ಪಂದ್ಯದಲ್ಲಿ ಮಹಿಳೆಯರ ಸಿಂಗಲ್ಸ್ ನಲ್ಲಿ ಬೌಲ್ಟರ್‌ರನ್ನು 6-1, 7-6(2) ಸೆಟ್‌ಗಳಿಂದ ಮಣಿಸಿದರು. ಅಮೆರಿಕ ಹಾಗೂ ಬ್ರಿಟನ್ ನಡುವಣ ಪಂದ್ಯವನ್ನು ಸಮಬಲಗೊಳಿಸಿದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಬ್ರಿಟನ್‌ನ ಬೌಲ್ಟರ್ ಹಾಗೂ ಕ್ಯಾಮರೂನ್ ನೋರ್ರಿ ಜೋಡಿ ಅಮೆರಿಕದ ವಿಲಿಯಮ್ಸ್ ಹಾಗೂ ಫ್ರಾನ್ಸಿಸ್ ಟಿಯಾಫೊರನ್ನು 3-4(2), 4-3(4), 4-1 ಅಂತರದಿಂದ ಮಣಿಸಿ 2-1 ಮುನ್ನಡೆ ಸಾಧಿಸಿದರು.

ಗ್ರೀಸ್ ಹಾಗೂ ರೋಜರ್ ಫೆಡರರ್ ನೇತೃತ್ವದ ಸ್ವಿಟ್ಝರ್ಲೆಂಡ್ ವಿರುದ್ಧ ಸೋತಿರುವ ಅಮೆರಿಕ ತಂಡ ಈಗಾಗಲೇ ಸ್ಪರ್ಧೆಯಿಂದ ಹೊರ ನಡೆದಿದೆ. ಹೀಗಾಗಿ 37ರ ಹರೆಯದ ಸೆರೆನಾ ಅವರ ಮೂರನೇ ಹಾಪ್‌ಮನ್ ಕಪ್ ಕನಸು ಭಗ್ನವಾಗಿದೆ. ಇದಕ್ಕೆ ಮೊದಲು ನಡೆದ ಪುರುಷರ ಸಿಂಗಲ್ಸ್ ನಲ್ಲಿ ಬ್ರಿಟನ್ ಆಟಗಾರ ನೋರ್ರಿ ಅಮೆರಿಕದ ಟಿಯಾಫೊರನ್ನು 7-6(4), 6-0 ಅಂತರದಿಂದ ಸೋಲಿಸಿ ತನ್ನ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 20ರ ಹರೆಯದ ಟಿಯಾಫೊ 3 ಪಂದ್ಯಗಳಲ್ಲಿ ಕೇವಲ 1 ಸೆಟನ್ನು ಮಾತ್ರ ಗೆದ್ದುಕೊಂಡಿದ್ದಾರೆ. 91ನೇ ರ್ಯಾಂಕಿನ ನೋರ್ರಿ ಪರ್ತ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ತನ್ನ ಮೊದಲ ಪಂದ್ಯದಲ್ಲಿ ಗ್ರೀಸ್‌ನ ನಂ.15ನೇ ರ್ಯಾಂಕಿನ ಆಟಗಾರ ಸ್ಟೆಫನೊಸ್ ಸಿಟ್‌ಸಿಪಾಸ್‌ರನ್ನು ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News