ಸಲೀಮಾ, ಲಾಲ್‌ರೆಮ್ಸಿಯಾಮಿ ಸೇರ್ಪಡೆ
Update: 2019-01-03 23:43 IST
ಹೊಸದಿಲ್ಲಿ, ಜ.3: ಬೆಂಗಳೂರಿನಲ್ಲಿ ಶುಕ್ರವಾರದಿಂದ ಆರಂಭವಾಗುವ ರಾಷ್ಟ್ರೀಯ ಮಹಿಳಾ ಹಾಕಿ ಶಿಬಿರಕ್ಕೆ ಯುವ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸಲೀಮಾ ತೆಟೆ ಹಾಗೂ ಲಾಲ್‌ರೆಮ್ಸಿಯಾಮಿ ಅವರನ್ನೊಳಗೊಂಡ 33 ಸಂಭಾವ್ಯ ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.
ತೆಟೆ ಹಾಗೂ ಲಾಲ್ ರೆಮ್ಸಿಯಾಮಿ ಅವರನ್ನು ಹೊರತುಪಡಿಸಿ ಹಲವು ಹಿರಿಯ ಆಟಗಾರ್ತಿಯರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜ.24ರಿಂದ ಭಾರತ ತಂಡ ಸ್ಪೇನ್ ಪ್ರವಾಸ ಕೈಗೊಳ್ಳಲಿದ್ದು, ಈ ಕಾರಣಕ್ಕಾಗಿ ಈ ಶಿಬಿರವು ತಂಡದ ಮುಖ್ಯ ಕೋಚ್ ಜೋಯರ್ಡ್ ಮಾರಿಜ್ನೆ ಅವರ ಹದ್ದಿನಕಣ್ಣಿನಲ್ಲಿ ನಡೆಯಲಿದೆ.
ಭಾರತ ವನಿತಾ ಹಾಕಿ ತಂಡ ಕಳೆದ ವರ್ಷ ಕೆಲವು ಅತ್ಯುತ್ತಮ ಫಲಿತಾಂಶಗಳನ್ನು ಪಡೆದಿತ್ತು. ಈ ಕಾರಣ ವಿಶ್ವ ರ್ಯಾಂಕಿಂಗ್‌ನಲ್ಲಿ 9ನೇ ಸ್ಥಾನಕ್ಕೇರಿತ್ತು. ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಗೂ ಏಶ್ಯನ್ ಗೇಮ್ಸ್‌ಗಳಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿತ್ತು.