ಎಐಟಿಎ: ಆಯ್ಕೆ ಸಮಿತಿಗೆ ಝೀಶಾನ್ ಅಲಿ ವಾಪಸ್
Update: 2019-01-03 23:44 IST
ಹೊಸದಿಲ್ಲಿ, ಜ.3: ರಾಷ್ಟ್ರೀಯ ಟೆನಿಸ್ ಒಕ್ಕೂಟವು ಡೇವಿಸ್ ಕಪ್ ಮಾಜಿ ಕೋಚ್ ಝೀಶಾನ್ ಅಲಿಯವರನ್ನು ಹಿರಿಯರ ಆಯ್ಕೆ ಸಮಿತಿಗೆ ಮರಳಿ ನೇಮಿಸಿದೆ. ಪ್ರವಾಸದ ಸಂದರ್ಭದಲ್ಲಿ ಆಟಗಾರರೊಂದಿಗೆ ನೇರ ಸಂಪರ್ಕ ಸಾಧ್ಯವಾಗುವುದು ಅಲಿಯವರಿಂದ ಮಾತ್ರ ಎಂಬುದು ಮನದಟ್ಟಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಗುರುಗ್ರಾಮದಲ್ಲಿ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ನಡೆಸಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಜ್ಞರ ಸಮಿತಿಯ ಮುಖ್ಯಸ್ಥ ಎಸ್.ಪಿ. ಮಿಶ್ರಾ ಹಾಗೂ ಝೀಶಾನ್ ಅಲಿಯವರನ್ನು ತೆಗೆದುಹಾಕಿ ಆ ಸ್ಥಾನಕ್ಕೆ ಮಾಜಿ ಆಟಗಾರ ವಿಶಾಲ್ ಉಪ್ಪಲ್ ಹಾಗೂ ಅಂಕಿತಾ ಭಾಂಬ್ರಿ ಅವರನ್ನು ನೇಮಿಸಲಾಗಿತ್ತು.
ಸಮಿತಿಯಲ್ಲಿ ಈಗಾಗಲೇ ಇದ್ದ ರೋಹಿತ್ ರಾಜ್‌ಪಾಲ್ ಅವರನ್ನು ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ನಂದನ್ ಬಾಲ್ ಹಾಗೂ ಬಲ್‌ರಾಮ್ ಸಿಂಗ್‌ರನ್ನು ಸಮಿತಿಯಲ್ಲಿ ಉಳಿಸಿಕೊಳ್ಳಲಾಗಿತ್ತು. ಮತ್ತೆ ಆಯ್ಕೆ ಸಮಿತಿಗೆ ಮರಳುತ್ತಿರುವುದು ತನಗೆ ಖುಷಿ ನೀಡಿದೆ ಎಂದು ಝೀಶಾನ್ ಅಲಿ ಹೇಳಿದ್ದಾರೆ.