ಪಂಜಿಮೊಗರು: ಯುವಕನ ಬರ್ಬರ ಹತ್ಯೆ

Update: 2019-01-04 04:08 GMT

ಮಂಗಳೂರು, ಜ.4: ಯುವಕನೋರ್ವನನ್ನು ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಸಮೀಪ ಗುರುವಾರ ರಾತ್ರಿ ನಡೆದಿದೆ.

ಮೃತರನ್ನು ಉರುಂದಾಡಿ ನಿವಾಸಿ ಯೋಗೀಶ್ ಎಂಬವರ ಪುತ್ರ ರಾಕೇಶ್(27) ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕನಾಗಿದ್ದ ರಾಕೇಶ್ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ತನ್ನ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ.

ರಾಕೇಶ್ ಅವರ ಸ್ಕೂಟರ್ ಪಂಜಿಮೊಗರು ಸಮೀಪದ ಮಾಲಾಡಿ ರೋಡ್ ಎಂಬಲ್ಲಿಗೆ ತಲುಪಿದಾಗ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

 ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಈ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News