ಸಹಜಸ್ಥಿತಿಯತ್ತ ಕಾಸರಗೋಡು: ಮಂಜೇಶ್ವರ ತಾಲೂಕಿನಲ್ಲಿ ನಿಷೇಧಾಜ್ಞೆ

Update: 2019-01-04 05:40 GMT

ಕಾಸರಗೋಡು, ಜ.4: ಶಬರಿಮಲೆಯಲ್ಲಿ ಯುವತಿಯರ ಪ್ರವೇಶಕ್ಕೆ ಸಂಬಂಧಪಟ್ಟಂತೆ ಗುರುವಾರ ಕರೆ ನೀಡಲಾಗಿದ್ದ ಹರತಾಳದ ಸಂದರ್ಭ ಉದ್ವಿಗ್ನಗೊಂಡಿದ್ದ ಕಾಸರಗೋಡು ಜಿಲ್ಲೆ ಇಂದು ಸಹಜ ಸ್ಥಿತಿಯತ್ತ ಮರಳುತ್ತಿದೆ.

ಇಂದು ಬೆಳಗ್ಗೆಯಿಂದ ಜಿಲ್ಲಾದ್ಯಂತ ಜನಸಂಚಾರ, ವಾಹನಗಳ ಓಡಾಟ ಎಂದಿನಂತಿದ್ದು, ಅಂಗಡಿಮುಂಗಟ್ಟುಗಳು ತೆರೆದಿವೆ. ಹರತಾಳ ಮುಗಿದ ಬಳಿಕವೂ ಚೂರಿ ಇರಿತಗಳಂತಹ ಅಹಿತಕರ ಘಟನೆಗಳು ಮುಂದುವರಿದಿದ್ದ ಮಂಜೇಶ್ವರ ತಾಲೂಕಿನಲ್ಲೂ ಪರಿಸ್ಥಿತಿ ಶಾಂತವಾಗಿದ್ದು, ತಾಲೂಕಿನಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅದೇರೀತಿ ಇಂದು ತಾಲೂಕಿನ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಗುರುವಾದ ಹರತಾಳ ಸಂದರ್ಭ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ತಡರಾತ್ರಿಯವರೆಗೂ ಅದು ಮುಂದುವರಿದಿತ್ತು. ಕಳೆದ ರಾತ್ರಿ ಮಂಜೇಶ್ವರ ಕಡಂಬಾರ್ ನಲ್ಲಿ ಇಬ್ಬರು ಮತ್ತು ಕುಂಬಳೆ ಶಿರಿಯದಲ್ಲಿ ಓರ್ವನನ್ನು ಇರಿದು ಗಾಯಗೊಳಿಸಲಾಗಿದೆ.

ಕಡಂಬಾರ್‌ನಲ್ಲಿ ಗುರುಪ್ರಸಾದ್(23) ಮತ್ತು ಕಿರಣ್ ಕುಮಾರ್ (40) ಎಂಬವರ ಮೇಲೆ ಮೂರು ಬೈಕ್ ಗಳಲ್ಲಿ ಆಗಮಿಸಿದ ತಂಡವೊಂದು ಚೂರಿಯಿಂದ ಇರಿದು ದಾಳಿ ನಡೆಸಿದೆ. ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂಬಳೆ ಶಿರಿಯ ಬಳಿ ವಸಂತ ಎಂಬವರನ್ನು ಇರಿದು ಗಾಯಗೊಳಿಸಲಾಗಿದೆ.

ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News