×
Ad

ತೇಜಸ್ ಯುದ್ಧವಿಮಾನದ ಶಸ್ತ್ರಸಜ್ಜಿತ ಆವೃತ್ತಿ ಉತ್ಪಾದಿಸಲಿರುವ ಎಚ್‌ಎಎಲ್

Update: 2019-01-04 23:27 IST

 ಬೆಂಗಳೂರು, ಜ.4: ತೇಜಸ್ ಲಘು ಯುದ್ಧವಿಮಾನದ ಶಸ್ತ್ರಸಜ್ಜಿತ ಆವೃತ್ತಿ ಉತ್ಪಾದಿಸಲು ಹಿಂದುಸ್ತಾನ್ ಏರೋನಾಟಿಕಲ್ ಲಿ.(ಎಚ್‌ಎಎಲ್)ಗೆ ಅನುಮತಿ ನೀಡಲಾಗಿದ್ದು, ಇಂತಹ ಮೊದಲ ಯುದ್ಧವಿಮಾನ ಈ ವರ್ಷಾಂತ್ಯಕ್ಕೆ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ತೇಜಸ್ ಎಂಕೆ1 ವಿಮಾನಗಳ ಉತ್ಪಾದನೆಯನ್ನು ಅಂತಿಮ ಪರಿಚಾಲನಾ ಪರವಾನಿಗೆಯಡಿ ಆರಂಭಿಸಲು ಮಿಲಿಟರಿ ಏರ್‌ವರ್ದಿನೆಸ್ ಆ್ಯಂಡ್ ಸರ್ಟಿಫಿಕೇಶನ್ ಸೆಂಟರ್(ಸಿಇಎಂಐಎಲ್‌ಎಸಿ) ಹಸಿರು ನಿಶಾನೆ ತೋರಿದೆ ಎಂದು ಅವರು ತಿಳಿಸಿದ್ದಾರೆ.

 ಪ್ರಯೋಗಾರ್ಥ ಪರೀಕ್ಷೆಯ ಬಳಿಕ ವಾಸ್ತವ ಪರಿಚಾಲನಾ ಪರವಾನಿಗೆ ಕಾರ್ಯರೂಪಕ್ಕೆ ಬರಲಿದೆ. ಅಂತಿಮ ಪರಿಚಾಲನಾ ಒಪ್ಪಿಗೆ (ಎಫ್‌ಒಸಿ) ಪಡೆಯಲು ಆಗಸ ಮಧ್ಯದಲ್ಲಿ ಇಂಧನ ತುಂಬಿಸುವ ಸಾಮರ್ಥ್ಯ, ಎಇಎಸ್‌ಎ ರೇಡಾರ್, ಇಲೆಕ್ಟ್ರಾನಿಕ್ ವಾಟರ್ ಸೂಟ್ ‌ಗಳು, ವಿವಿಧ ಬಾಂಬ್‌ ಗಳು ಹಾಗೂ ಆಯುಧಗಳನ್ನು ಯುದ್ಧವಿಮಾನ ಹೊಂದಿರಬೇಕು ಎಂದು ವಕ್ತಾರರು ತಿಳಿಸಿದ್ದಾರೆ.

ತೇಜಸ್ ‌ನ ವಿನ್ಯಾಸ ರೂಪಿಸಿ ಅಭಿವೃದ್ಧಿಗೊಳಿಸಿರುವ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಸಲ್ಲಿಸಿರುವ ವಿನ್ಯಾಸ ದಾಖಲೆಗಳನ್ನು ಸಿಇಎಂಐಎಲ್‌ಎಸಿ ಸ್ವೀಕರಿಸಿದೆ. ಭಾರತೀಯ ವಾಯುಪಡೆ 40 ಲಘು ಯುದ್ಧವಿಮಾನಗಳಿಗೆ ಆದೇಶ ಸಲ್ಲಿಸಿದ್ದು ಇದರಲ್ಲಿ 20 ಎಫ್‌ಒಸಿ ಸಂರಚನೆ ಹೊಂದಿರಲಿದೆ. ಉಳಿದ 20 ಆರಂಭಿಕ ಕಾರ್ಯಾಚರಣೆ ಒಪ್ಪಿಗೆ ಸಂರಚನೆ ಹೊಂದಿರುತ್ತದೆ. ಈಗಾಗಲೇ ಸುಮಾರು 11 ಐಒಸಿ ಸಂರಚನೆಯ ತೇಜಸ್ ವಿಮಾನಗಳನ್ನು ವಾಯುಪಡೆಗೆ ಹಸ್ತಾಂತರಿಸಲಾಗಿದ್ದು, ಇವುಗಳ ಪರೀಕ್ಷಾ ಪ್ರಯೋಗಾರ್ಥ ಹಾರಾಟ ನಡೆಸುತ್ತಿದೆ . ಈ ವರ್ಷದ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಪ್ರಪ್ರಥಮ ಶಸ್ತ್ರಾಸ್ತ್ರಸಜ್ಜಿತ ಯುದ್ಧವಿಮಾನದ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ವಕ್ತಾರರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News