ನಿಮ್ಮ ಕಾರಿಗೆ ಸಣ್ಣಪುಟ್ಟ ಹಾನಿಯಾದರೆ ವಿಮೆ ಮೊತ್ತವನ್ನು ಕ್ಲೈಮ್ ಮಾಡಬಾರದು: ಏಕೆ ಗೊತ್ತೇ?

Update: 2019-01-04 18:09 GMT

ವಾಹನ ಅಪಘಾತಗಳು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಸಂಭವಿಸುತ್ತವೆ. ನಮ್ಮ ಕಾರಿಗೆ ಅಪಘಾತವುಂಟಾಗಿ ಹಾನಿಯಾದಾಗ ನಮ್ಮ ತಲೆಗೆ ಮೊದಲು ಹೊಳೆಯುವುದೇ ಅದರ ವಿಮೆ ಪಾಲಿಸಿ. ಆದರೆ ಅಪಘಾತದ ಬಳಿಕ ವಿಮೆ ಹಣಕ್ಕಾಗಿ ಹಕ್ಕು ಮಂಡಿಸಿದರೆ ಅದು ಪಾಲಿಸಿಯ ಮೇಲೆ ಸಂಚಿತವಾಗಿರುವ ‘ನೋ ಕ್ಲೈಮ್ ಬೋನಸ್(ಎನ್‌ಸಿಬಿ)’ನ ಲಾಭವನ್ನು ನಮ್ಮಿಂದ ಕಿತ್ತುಕೊಳ್ಳುತ್ತದೆ.

ಕ್ಲೈಮ್ ಅಥವಾ ಹಕ್ಕು ಕೋರಿಕೆ ಸಲ್ಲಿಸಲು ಅಂತಹ ಬಿಗಿಯಾದ ನಿಯಮಗಳೇನೂ ಇಲ್ಲ ಮತ್ತು ಕ್ಲೈಮ್ ಸಲ್ಲಿಸುವ ಮುನ್ನ ಅದರಿಂದ ಎಷ್ಟು ಲಾಭವನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ನಮ್ಮ ಕಾರಿಗೆ ಅಪಘಾತವಾದಾಗ ವಿಮೆ ಹಣಕ್ಕಾಗಿ ಕ್ಲೈಮ್ ಸಲ್ಲಿಸಬೇಕೇ ಅಥವಾ ಬೇಡವೇ ಎನ್ನುವುದು ನಷ್ಟದ ಪ್ರಮಾಣ,ಎನ್‌ಸಿಬಿಯ ಮೇಲೆ ಪರಿಣಾಮ, ಅನ್ವಯವಾಗುವ ಡಿಡಕ್ಟಿಬಲ್‌ಗಳು(ಕಳೆಯಬಹುದಾದ ಮೊತ್ತ) ಮತ್ತು ಭವಿಷ್ಯದ ಪ್ರೀಮಿಯಂ ಇವುಗಳನ್ನು ಪ್ರಮುಖವಾಗಿ ಅವಲಂಬಿಸಿರುತ್ತದೆ. ಸಣ್ಣಪುಟ್ಟ ಮೊತ್ತಕ್ಕಾಗಿ ಕ್ಲೈಮ್ ಸಲ್ಲಿಸಬಾರದು ಎನ್ನುವುದು ವಾಹನ ಉದ್ಯಮದ ಹೆಚ್ಚಿನ ತಜ್ಞರ ಸಲಹೆ. ಇದಕ್ಕೆ ಕಾರಣಗಳಿಲ್ಲಿವೆ....

► ಎನ್‌ಸಿಬಿಯ ಮೇಲೆ ಪರಿಣಾಮ

ಎನ್‌ಸಿಬಿಯು ಒಂದು ವರ್ಷದಲ್ಲಿ ವಾಹನದ ಮೇಲಿನ ವಿಮೆ ಪಾಲಿಸಿಯಲ್ಲಿ ಯಾವುದೇ ಮೊತ್ತವನ್ನು ನಾವು ಕ್ಲೈಮ್ ಮಾಡಿರದಿದ್ದರೆ ವಿಮೆ ಕಂಪನಿಯು ವರ್ಷಾಂತ್ಯದಲ್ಲಿ ನವೀಕರಣ ಪ್ರೀಮಿಯಂ ಮೇಲೆ ನೀಡುವ ರಿಯಾಯಿತಿಯ ಮೊತ್ತವಾಗಿದೆ. ಮೊದಲ ಕ್ಲೈಮ್‌ರಹಿತ ವರ್ಷದ ಅಂತ್ಯದಲ್ಲಿ ಶೇ.20ರಿಂದ ಆರಂಭಗೊಳ್ಳುವ ಎನ್‌ಸಿಬಿ ಪ್ರತಿಯೊಂದು ಕ್ಲೈಮ್‌ ರಹಿತ ವರ್ಷದೊಂದಿಗೆ ಕ್ರಮೇಣವಾಗಿ ಹೆಚ್ಚುತ್ತ ಹೋಗುತ್ತದೆ. ಈ ರಿಯಾಯಿತಿಯು ಗರಿಷ್ಠ ಶೇ.50ಕ್ಕೆ ಸೀಮಿತವಾಗಿದೆ. ಒಂದೇ ಒಂದು ಕ್ಲೈಮ್‌ ನ್ನು ಪಡೆದುಕೊಂಡರೂ ಎನ್‌ಸಿಬಿ ಝೀರೊಕ್ಕೆ ಮರಳುತ್ತದೆ ಮತ್ತು ಇದು ಸಣ್ಣಪುಟ್ಟ ಕ್ಲೈಮ್‌ ಗಳನ್ನು ಮಾಡಬಾರದು ಎನ್ನುವುದಕ್ಕೆ ಇನ್ನೊಂದು ಕಾರಣವಾಗಿದೆ.

► ಡಿಡಕ್ಟಿಬಲ್‌ಗಳ ನಿಯಮ

ಹೆಚ್ಚಿನ ಕಾರು ವಿಮೆ ಪಾಲಿಸಿಗಳಲ್ಲಿ ‘ಡಿಡಕ್ಟಿಬಲ್’ ಅಥವಾ ‘ಎಕ್ಸೆಸ್’ಎಂದು ಕರೆಯಲಾಗುವ ಮೊತ್ತವನ್ನು ಉಲ್ಲೇಖಿಸಲಾಗಿರುತ್ತದೆ. ಇದು ಯಾವುದೇ ಕ್ಲೈಮ್‌ಗೆ ಸಂಬಂಧಿಸಿದಂತೆ ಕಾರಿನ ಮಾಲಕನು ಕಡ್ಡಾಯವಾಗಿ ಭರಿಸಬೇಕಾದ ಭಾಗವಾಗಿದೆ. ಕ್ಲೈಮ್ ಪ್ರಕರಣದಲ್ಲಿ ಕಂಪನಿಯು ವಿಮೆ ಹಣದಲ್ಲಿ ಸವಕಳಿ ಇತ್ಯಾದಿಗಳಂತಹ ಕಡಿತಗಳಿಗೆ ಒಳಪಟ್ಟು ಈ ಡಿಡಕ್ಟಿಬಲ್ ಮೊತ್ತವನ್ನು ಕಳೆದು ಉಳಿದ ಹಣವನ್ನು ಮಾತ್ರ ಪಾವತಿಸುತ್ತದೆ. ಹೀಗಾಗಿ ಈ ಡಿಡಕ್ಟಿಬಲ್ ಅಥವಾ ಕಳೆಯಬಹುದಾದ ಮೊತ್ತಕ್ಕಿಂತ ಕಡಿಮೆ ಅಥವಾ ಸರಿಸುಮಾರು ಅದರಷ್ಟೇ ಇರುವ ಸಣ್ಣಮೊತ್ತದ ರಿಪೇರಿ ಬಿಲ್‌ಗಾಗಿ ಕ್ಲೈಮ್ ಸಲ್ಲಿಸುವುದರಲ್ಲಿ ಯಾವುದೇ ಅರ್ಥವಿಲ್ಲ,ಇದರಿಂದ ನಮಗೆ ಹೇಳಿಕೊಳ್ಳುವಂತಹ ಲಾಭವೇನಿಲ್ಲ.

 ಉದಾಹರಣೆಗೆ ನಿಮ್ಮ ಕಾರಿನ ಪಾಲಿಸಿಯಲ್ಲಿ 2,000 ರೂ.ಗಳನ್ನು ಕಳೆಯಬಹುದಾದ ಮೊತ್ತ ಎಂದು ನಮೂದಿಸಲಾಗಿದೆ ಮತ್ತು ನಿಮ್ಮ ಪಾಲಿಸಿಯ ಮೇಲೆ ಎನ್‌ಸಿಬಿ 6,000 ರೂ.ಗಳಾಗುತ್ತದೆ ಎಂದಿಟ್ಟುಕೊಳ್ಳೋಣ. ಹೀಗಿದ್ದಾಗ ನೀವು 4,000 ರೂ.ಗಾಗಿ ಕ್ಲೈಮ್ ಮಾಡಿದ್ದೀರಿ ಎಂದಿಟ್ಟುಕೊಂಡರೆ ಬಿಲ್‌ನಲ್ಲಿ 2,000 ರೂ.ಗಳನ್ನು ನೀವು ಕೈಯಿಂದ ಪಾವತಿಸಬೇಕಾಗುತ್ತದೆ,ಜೊತೆಗೆ 6,000 ರೂ.ಗಳ ಎನ್‌ಸಿಬಿ ರಿಯಾಯಿತಿಯನ್ನೂ ಕಳೆದುಕೊಳ್ಳುತ್ತೀರಿ. ಇಂತಹ ಸಂದರ್ಭಗಳಲ್ಲಿ ಕಾರಿನ ರಿಪೇರಿ ಬಿಲ್ 8,000 ರೂ,ಗಿಂದ ಸಾಕಷ್ಟು ಹೆಚ್ಚು,ಅಂದರೆ ಸುಮಾರು 13,000 ರೂ.ಗಳ ಮೇಲಿದ್ದರೆ ಮಾತ್ರ ಕ್ಲೈಮ್ ಸಲ್ಲಿಸುವುದು ಹಣಕಾಸು ಜಾಣತನವಾಗುತ್ತದೆ. ಇಲ್ಲಿ ನಿಮ್ಮ ಕಿಸೆಯಿಂದ ಹೋಗುವ 2,000ರೂ ಮತ್ತು ಎನ್‌ಸಿಬಿ ಸೇರಿದರೆ 8,000 ರೂ.ಗಳಾಗುತ್ತವೆ.

ಅಲ್ಲದೆ ಪದೇ ಪದೇ ಕ್ಲೈಮ್‌ಗಳನ್ನು ಸಲ್ಲಿಸುವುದರಿಂದ ಅದು ಕಾರಿನ ಮಾಲಕನ ಕ್ಲೈಮ್ ಹಿಸ್ಟರಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ನಿಮ್ಮ ಕಾರಿನ ರಿನ್ಯೂವಲ್ ಪ್ರೀಮಿಯಂ ಹೆಚ್ಚಲು ಕಾರಣವಾಗುತ್ತದೆ. ಇಲ್ಲಿ ಥರ್ಡ್ ಪಾರ್ಟಿಯಿಂದ ನಿಮ್ಮ ಕಾರಿಗೆ ಹಾನಿಯಾಗಿದ್ದರೆ ಸಾಮಾನ್ಯ ಸನ್ನಿವೇಶಗಳಲ್ಲಿ ಪ್ರೀಮಿಯಂ ಮೊತ್ತ ಹೆಚ್ಚುವ ಸಾಧ್ಯತೆಗಳು ಕಡಿಮೆ. ಆದರೆ ತಪ್ಪು ನಿಮ್ಮದೇ ಆಗಿದ್ದರೆ ಮತ್ತು ಪದೇ ಪದೇ ಕ್ಲೈಮ್ ಮಾಡುತ್ತಿದ್ದರೆ ಪ್ರೀಮಿಯಂ ಏರಿಕೆಯಿಂದ ನೀವು ಪಾರಾಗಲು ಸಾಧ್ಯವಿಲ್ಲ.

ಅಲ್ಲದೆ ಥರ್ಡ್ ಪಾರ್ಟಿಯ ತಪ್ಪಿನಿಂದ ಅಪಘಾತವಾಗಿದ್ದರೆ ಕ್ಲೈಮ್ ಸಲ್ಲಿಕೆಯಿಂದ ಎನ್‌ಸಿಬಿಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಏಕೆಂದರೆ ಎನ್‌ಸಿಬಿಯು ಪಾಲಿಸಿಯಲ್ಲಿನ ‘ಸ್ವಂತ ಹಾನಿ’ ಭಾಗದ ಮೇಲಿನ ರಿಯಾಯಿತಿಯಾಗಿದೆಯೇ ಹೊರತು ‘ಲಯಬಲಿಟಿ’ ಭಾಗದ ಮೇಲೆ ಅಲ್ಲ.

ಹೀಗಾಗಿ ಕಾರಿಗೆ ಸಣ್ಣಪುಟ್ಟ ಹಾನಿಯುಂಟಾದಾಗ ರಿಪೇರಿ ವೆಚ್ಚವನ್ನು ನಾವೇ ಸ್ವತಃ ಭರಿಸುವುದು ಮತ್ತು ಕ್ಲೈಮ್ ಸಲ್ಲಿಸದಿರುವುದು ಬುದ್ಧಿವಂತಿಕೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News