ನಿರುದ್ಯೋಗ ದೇಶ ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆ: ಕೇಂದ್ರ ಸಚಿವ ಗಡ್ಕರಿ

Update: 2019-01-05 15:59 GMT

ನಾಗ್‌ಪುರ, ಜ.5: ಕೆಲಸ ಮತ್ತು ಉದ್ಯೋಗಕ್ಕೆ ವ್ಯತ್ಯಾಸವಿದೆ. ನಿರುದ್ಯೋಗವು ದೇಶ ಎದುರಿಸುತ್ತಿರುವ ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಫಾರ್ಚ್ಯೂನ್ ಪ್ರತಿಷ್ಠಾನ ಆಯೋಜಿಸಿದ್ದ ಯುವ ಸಬಲೀಕರಣ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲಸಕ್ಕೆ ಮಿತಿಯಿರುವ ಕಾರಣ ಉದ್ಯೋಗ ಸೃಷ್ಟಿ ಎಂಬುದು ಯಾವುದೇ ಸರಕಾರದ ಆರ್ಥಿಕ ನೀತಿಯ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.

ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಎಂದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಮಹಾರಾಷ್ಟ್ರ ಸರಕಾರವು ವಿದರ್ಭ ಮತ್ತು ನಾಗಪುರದಲ್ಲಿ ಕೆಲಸ ಸೃಷ್ಟಿಸಲು ಸಫಲವಾಗಿದೆ ಎಂದು ನಾಗಪುರ ಮೆಟ್ರೋ ರೈಲು ಸೇವೆ, ಬುಟಿಬೊರಿ ಎಂಐಡಿಸಿ ಪ್ರದೇಶಗಳನ್ನು ಉದಾಹರಣೆಯಾಗಿ ನೀಡಿದರು. ವಿದರ್ಭದ ಕನಿಷ್ಟ 50 ಸಾವಿರ ಯುವಜನತೆಗೆ ಉದ್ಯೋಗಾವಕಾಶ ನೀಡಲು ನಿರ್ಧರಿಸಲಾಗಿದ್ದು ಈಗಾಗಲೇ 27 ಸಾವಿರ ಯುವಜನತೆ ಉದ್ಯೋಗಾವಕಾಶ ಪಡೆದಿದ್ದಾರೆ. ಈ ವರ್ಷಾಂತ್ಯದೊಳಗೆ ಈ ಸಂಖ್ಯೆ 50 ಸಾವಿರ ತಲುಪಲಿದೆ. ಉದ್ಯೋಗ ಸೃಷ್ಟಿಸುವ ಉದ್ದಿಮೆಗಳನ್ನು ಸ್ಥಾಪಿಸಲು ವಿದ್ಯುಚ್ಛಕ್ತಿ, ನೀರು ಮತ್ತು ರಸ್ತೆ ಸಂಪರ್ಕ ಅಗತ್ಯವಾಗಿದ್ದು ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.

ಮಹಾರಾಷ್ಟ್ರದಲ್ಲಿ 1 ಲಕ್ಷ ಕೋಟಿ ರೂ. ವೆಚ್ಚದ ನೀರಾವರಿ ಕಾರ್ಯಗಳನ್ನು ಕೇಂದ್ರ ಸರಕಾರ ಆರಂಭಿಸಲಿದೆ . ಮುದ್ರಾ ಯೋಜನೆಯಡಿ ಸುಮಾರು 9.5 ಲಕ್ಷ ಕೋಟಿ ರೂ. ಮೊತ್ತದ ಸಾಲ ವಿತರಿಸಲಾಗಿದೆ. ಅಲ್ಲದೆ ಕೃಷಿ ಕ್ಷೇತ್ರಕ್ಕೆ 11 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ . ಗರಿಷ್ಟ ಸಂಖ್ಯೆಯ ಕೆಲಸಗಾರರನ್ನು ಸೇರಿಸಿಕೊಂಡು ಗರಿಷ್ಟ ಉತ್ಪಾದನೆ ಮಾಡಬೇಕು ಎಂಬ ಮಹಾತ್ಮಾ ಗಾಂಧೀಜಿಯವರ ಮಾತನ್ನು ಈ ಸಂದರ್ಭ ಗಡ್ಕರಿ ಸ್ಮರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News