ಗಡ್ಕರಿ ಉಪಪ್ರಧಾನಿಯಾಗಲಿ, ಚೌಹಾಣ್ ಪಕ್ಷದ ಅಧ್ಯಕ್ಷರಾಗಲಿ: ಬಿಜೆಪಿ ಹಿರಿಯ ನಾಯಕ ಸಂಘಪ್ರಿಯ ಗೌತಮ್

Update: 2019-01-05 16:12 GMT

ಲಕ್ನೋ, ಜ.5: ಇನ್ನೇನು ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಂತೆ ಬಿಜೆಪಿ ಹಿರಿಯ ನಾಯಕ ಸಂಘಪ್ರಿಯ ಗೌತಮ್ ಹೊಸ ಬಾಂಬ್ ಸಿಡಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಉಪ ಪ್ರಧಾನಿಯಾಗಿ ನೇಮಿಸಬೇಕು ಎಂದಿರುವ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಜವಾಬ್ದಾರಿಯನ್ನು ಕೇಂದ್ರ ಗೃಹಸಚಿವ ರಾಜ್ ನಾಥ್ ಸಿಂಗ್ ರಿಗೆ ವಹಿಸಬೇಕು ಎಂದಿದ್ದಾರೆ.

ಮಧ್ಯ ಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಬೇಕು ಹಾಗು ಅಮಿತ್ ಶಾ ರಾಜ್ಯಸಭೆಯಲ್ಲಿ ಕೆಲಸ ಮಾಡಬೇಕು ಎಂದವರು ಇದೇ ಸಂದರ್ಭ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟನೆ ನೀಡಿರುವ ಅವರು, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ರನ್ನು ಧಾರ್ಮಿಕ ಕೆಲಸಗಳಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ. ನರೇಂದ್ರ ಮೋದಿಯವರು ದೇಶ ಕಂಡ ಅತೀ ದೊಡ್ಡ ನಾಯಕರಲ್ಲೊಬ್ಬರು ಎಂದು ಒಪ್ಪಿಕೊಂಡಿರುವ ಸಂಘಪ್ರಿಯ 2019ರಲ್ಲಿ ಮೋದಿ ಅಲೆ ಪುನರಾವರ್ತನೆಯಾಗುವುದು ‘ಸಂಶಯ’ ಎಂದಿದ್ದಾರೆ.

“ಮೋದಿ ಮಂತ್ರ ಮತ್ತೊಮ್ಮೆ ಕೆಲಸ ಮಾಡುವುದು ಅಸಂಭವನೀಯವಾಗಿದ್ದು, ಪಕ್ಷದ ಕಾರ್ಯಕರ್ತರು ತಮ್ಮಲ್ಲೇ ಇದನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಮೌನದಿಂದಿದ್ದಾರೆ” ಎಂದವರು ಹೇಳಿದ್ದಾರೆ.

ಕೇಂದ್ರ ಸರಕಾರದ ನೀತಿಗಳ ವಿರುದ್ಧ ಎಲ್ಲೆಡೆ ಆಕ್ರೋಶವಿದ್ದು, ಈಗ ಚುನಾವಣೆ ನಡೆದರೆ ಎಲ್ಲಾ ರಾಜ್ಯಗಳಲ್ಲೂ ಜನರು ಬಿಜೆಪಿಯನ್ನು ಕಿತ್ತೆಸೆಯುತ್ತಾರೆ. ಗೋವಾ ಮತ್ತು ಮಣಿಪುರಗಳಲ್ಲಿ ಹೇಗಾದರೂ ಸರಕಾರ ರಚಿಸಬೇಕು ಎನ್ನುವ ಸರಕಾರದ ನಿರ್ಧಾರ ಸರಿಯಾದ ಕ್ರಮವಲ್ಲ ಎಂದವರು ಹೇಳಿದರು.

88 ವರ್ಷದ ಈ ನಾಯಕ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News