ವರ್ಷಗಳ ಕಾಲ ಸರಕಾರ ಬಂದ್‌ಗೂ ಸಿದ್ಧ ಎಂದ ಟ್ರಂಪ್ !

Update: 2019-01-05 16:39 GMT

ವಾಶಿಂಗ್ಟನ್, ಜ. 5: ಮೆಕ್ಸಿಕೊ ಗಡಿ ಗೋಡೆಗೆ ಸಂಸತ್ತು ಕಾಂಗ್ರೆಸ್ ಹಣ ನೀಡದಿದ್ದರೆ ಈಗಾಗಲೇ ಎರಡು ವಾರಗಳಿಂದ ಚಾಲ್ತಿಯಲ್ಲಿರುವ ಸರಕಾರಿ ಸ್ಥಗಿತವನ್ನು ವರ್ಷಗಳ ಕಾಲ ಮುಂದುವರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ‘ಬೆದರಿಸಿದ್ದಾರೆ’.

ಇದೇ ವಿಷಯದಲ್ಲಿ ಶ್ವೇತಭವನದಲ್ಲಿ ಕಾಂಗ್ರೆಸ್ ನಾಯಕರ ಜೊತೆ ನಡೆದ ಸಭೆ ಯಾವುದೇ ನಿರ್ಧಾರಕ್ಕೆ ಬರದೆ ಮುಕ್ತಾಯಗೊಂಡ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದರು. ಮೆಕ್ಸಿಕೊ ಗಡಿ ಗೋಡೆಯನ್ನು ಕಟ್ಟಲು ತಾನು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಎದುರಿಸಬಹುದಾಗಿದೆ ಎಂದು ಅವರು ಹೇಳಿದರು.

ಅಕ್ರಮ ವಲಸಿಗರು ಅಮೆರಿಕ ಪ್ರವೇಶಿಸದಂತೆ ತಡೆಯಲು ಗಡಿ ಗೋಡೆ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಶ್ವೇತಭವನದಲ್ಲಿ ಬಿಕ್ಕಟ್ಟನ್ನು ಹೋಗಲಾಡಿಸುವುದಕ್ಕೆ ಸಂಬಂಧಿಸಿ ನಡೆದ ಮಾತುಕತೆಯ ವೇಳೆ, ಸರಕಾರಿ ಯಂತ್ರದ ಸ್ಥಾಗಿತ್ಯವನ್ನು ವರ್ಷಗಳ ಕಾಲ ಮುಂದುವರಿಸುವುದಾಗಿ ಟ್ರಂಪ್ ಬೆದರಿಸಿದರು ಎಂಬುದಾಗಿ ಮಾತುಕತೆಯ ಬಳಿಕ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ಸುದ್ದಿಗಾರರಿಗೆ ತಿಳಿಸಿದರು.

ಬಳಿಕ, ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಟ್ರಂಪ್, ‘‘ಹೌದು, ನಾನು ಹಾಗೆಯೇ ಹೇಳಿದೆ’’ ಎಂದರು.

ಮಾತುಕತೆ ಮುಂದುವರಿಸುತ್ತೇವೆ: ಡೆಮಾಕ್ರಟಿಕ್ ನಾಯಕರು

‘‘ಸರಕಾರ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ನಾವು ಅಧ್ಯಕ್ಷರಿಗೆ ತಿಳಿಸಿದೆವು. ಅದನ್ನು ಅವರು ವಿರೋಧಿಸಿದರು. ನಾನು ಸರಕಾರವನ್ನು ಸುದೀರ್ಘ ಅವಧಿಯವರೆಗೆ, ಅಂದರೆ ತಿಂಗಳುಗಳು ಅಥವಾ ವರ್ಷಗಳ ಕಾಲವೂ ಬಂದ್ ಮಾಡುತ್ತೇನೆ ಎಂದು ಅವರು ಹೇಳಿದರು’’ ಎಂದು ಸೆನೆಟ್ ಅಲ್ಪಮತ ನಾಯಕ ಚಕ್ ಶೂಮರ್ ಶ್ವೇತಭವನದಲ್ಲಿ ಟ್ರಂಪ್‌ರನ್ನು ಭೇಟಿಯಾದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

‘‘ನಾವು ಹಲವು ವಿಷಯಗಳ ಬಗ್ಗೆ ಚರ್ಚಿಸಿದೆವು. ಅವುಗಳು ವಿವಾದಾಸ್ಪದ ವಿಷಯಗಳೇ ಆಗಿದ್ದವು. ಈ ಬಗ್ಗೆ ಚರ್ಚಿಸುವುದನ್ನು ನಾವು ಮುಂದುವರಿಸುತ್ತೇವೆ. ಆದರೆ, ಅವರು ಸರಕಾರವನ್ನು ತೆರೆಯದಿದ್ದರೆ ಎಷ್ಟು ಪ್ರಗತಿಯನ್ನು ಸಾಧಿಸಲಾಗುವುದು ಎಂದು ಹೇಳುವುದು ಕಷ್ಟ’’ ಎಂದು ಶೂಮರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News