ಮಕ್ಕಳ ಸಹಾಯವಾಣಿಗೆ ಬಂದ ಫೋನ್ ಕರೆ 3 ಪಟ್ಟು ಹೆಚ್ಚಳ : ವೀರೇಂದ್ರ ಕುಮಾರ್
ಹೊಸದಿಲ್ಲಿ, ಜ.5: ಕಳೆದ ನಾಲ್ಕು ವರ್ಷಗಳಲ್ಲಿ ಮಕ್ಕಳ ಸಹಾಯವಾಣಿಗೆ ಬಂದ ಕರೆಗಳ ಸಂಖ್ಯೆ ಸುಮಾರು 3 ಪಟ್ಟು ಹೆಚ್ಚಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಸಚಿವ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.
2013-14ರಲ್ಲಿ ಮಕ್ಕಳ ಸಹಾಯವಾಣಿ(1098)ಗೆ 38,22,081 ಕರೆಗಳು ಬಂದಿದ್ದರೆ 2017-18ರಲ್ಲಿ ಇದು 1,15,59,750 ಕರೆಗಳಿಗೆ ಹೆಚ್ಚಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಚಿವರು ತಿಳಿಸಿದರು. ಇವುಗಳಲ್ಲಿ 7,09,202 ಕರೆಗಳು ವೈದ್ಯಕೀಯ ಸಹಾಯ, ಆಶ್ರಯ, ರಕ್ಷಣೆ ಮುಂತಾದ ನೇರ ಮಧ್ಯಸ್ಥಿಕೆಗೆ ಸಂಬಂಧಿಸಿದ್ದವು. ಮಗುವಿನ ಅಪೇಕ್ಷೆಯಂತೆ ಸಂಬಂಧಪಟ್ಟವರ ನೆರವಿನಿಂದ ಸಹಾಯ ಒದಗಿಸಲಾಗಿದೆ ಎಂದು ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.
ಮಕ್ಕಳ ಸಹಾಯವಾಣಿಗೆ ಬರುವ ಕರೆಗಳಿಗೆ ಒಂದು ಗಂಟೆಯೊಳಗೆ ಸ್ಪಂದಿಸಲಾಗುವುದು. ತೊಂದರೆಯಲ್ಲಿ ಸಿಲುಕಿರುವ ಮಗುವಿಗೆ ಅಗತ್ಯಬಿದ್ದರೆ ಪೊಲೀಸ್, ಆಸ್ಪತ್ರೆ, ಮಕ್ಕಳ ಆಶ್ರಯಧಾಮಗಳಲ್ಲಿ ನೆಲೆ ಒದಗಿಸಲಾಗುವುದು. 11ರಿಂದ 14 ವರ್ಷದೊಳಗಿನ ಮಕ್ಕಳಿಂದ ಅತ್ಯಧಿಕ ದೂರು ಸ್ವೀಕರಿಸಲಾಗಿದೆ ಮತ್ತು ಇದರಲ್ಲಿ ಶೇ.60ರಷ್ಟು ಬಾಲಕರು. ಕೆಲವೊಮ್ಮೆ ಸುಮ್ಮನೆ ದೂರು ನೀಡುವ ಸಂದರ್ಭವೂ ಇದೆ. ಮನೆಯಲ್ಲಿ ಪೋಷಕರು ಬೈದರೆಂದು, ಪರೀಕ್ಷೆಯ ಒತ್ತಡವನ್ನು ನಿಭಾಯಿಸಲು ಆಗುತ್ತಿಲ್ಲ ಎಂಬ ಕರೆಗಳೂ ಬರುತ್ತವೆ. ಆಗ ಆ ಮಕ್ಕಳಿಗೆ ತಿಳಿಹೇಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
750 ಸರಕಾರೇತರ ಸಂಘಟನೆಗಳ ನೆರವಿನಿಂದ ಹೆಲ್ಪ್‌ಲೈನ್ ಮುಂಬೈ, ದಿಲ್ಲಿ, ಕೋಲ್ಕತಾ, ಚೆನ್ನೈ ಮತ್ತು ಬೆಂಗಳೂರು ನಗರಗಳಲ್ಲಿ ಕಾರ್ಯಾಚರಿಸುತ್ತಿದೆ.