×
Ad

ಎಚ್‌ಎಎಲ್ ಕುರಿತ ಹೇಳಿಕೆಗೆ ದಾಖಲೆ ಒದಗಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ

Update: 2019-01-06 20:21 IST

ಹೊಸದಿಲ್ಲಿ, ಜ.6: ಸರಕಾರ ಎಚ್‌ಎಎಲ್‌ಗೆ 1 ಲಕ್ಷ ಕೋಟಿ ಮೊತ್ತದ ವ್ಯಾಪಾರಾದೇಶ(ಆರ್ಡರ್)ಗಳನ್ನು ಒದಗಿಸಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ. ತನ್ನ ಹೇಳಿಕೆಯನ್ನು ಸಮರ್ಥಿಸುವ ದಾಖಲೆಯನ್ನು ಅವರು ನೀಡಬೇಕು ಅಥವಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಸರಕಾರ ಹೇಳಿಕೊಂಡಿರುವ 1 ಲಕ್ಷ ಕೋಟಿ ರೂ.ಯಲ್ಲಿ ಒಂದು ರೂಪಾಯಿ ಕೂಡಾ ಎಚ್‌ಎಎಲ್‌ಗೆ ಬಂದಿಲ್ಲ. ಅಲ್ಲದೆ ಒಂದೇ ಒಂದು ವ್ಯಾಪಾರಾದೇಶಕ್ಕೆ ಸಹಿ ಹಾಕಿಲ್ಲ ಎಂದು ಎಚ್‌ಎಎಲ್‌ನ ಹಿರಿಯ ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮದಲ್ಲಿ ಬಂದಿರುವ ವರದಿಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಕ್ಷಣಾ ಸಚಿವೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವ ಎಚ್‌ಎಎಲ್, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಿಬ್ಬಂದಿಗಳಿಗೆ ವೇತನ ಪಾವತಿಸಲು 1 ಸಾವಿರ ಕೋಟಿ ರೂ. ಸಾಲ ಪಡೆಯುವ ಅನಿವಾರ್ಯತೆಗೆ ಸಿಲುಕಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.

ಫ್ರಾನ್ಸ್‌ನೊಂದಿಗಿನ ರಫೇಲ್ ಯುದ್ಧವಿಮಾನ ಒಪ್ಪಂದದಲ್ಲಿ ಎಚ್‌ಎಎಲ್ ಅನ್ನು ಸರಕಾರ ಕಡೆಗಣಿಸಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇದಕ್ಕೆ ಇದಿರೇಟು ನೀಡಿರುವ ಕೇಂದ್ರ ಸರಕಾರ, ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಎಚ್‌ಎಎಲ್ ಅನ್ನು ಸಂಪೂರ್ಣ ಕಡೆಗಣಿಸಿತ್ತು. ಆದರೆ ಎನ್‌ಡಿಎ ನೇತೃತ್ವದ ಸರಕಾರದ ಆಳ್ವಿಕೆಯಲ್ಲಿ ಎಚ್‌ಎಎಲ್ ಅನ್ನು ಸದೃಢಗೊಳಿಸಲು ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಒಂದು ಸುಳ್ಳು ಹೇಳಿದರೆ ಅದನ್ನು ಸಮರ್ಥಿಸಿಕೊಳ್ಳಲು ಸತತವಾಗಿ ಸುಳ್ಳು ಹೇಳಬೇಕಾಗುತ್ತದೆ. ಪ್ರಧಾನಿಯ ರಫೇಲ್ ವ್ಯವಹಾರವನ್ನು ಸಮರ್ಥಿಸಿಕೊಳ್ಳುವ ಅತ್ಯುತ್ಸಾಹದಲ್ಲಿ ರಕ್ಷಣಾ ಸಚಿವೆ ಸಂಸತ್ತಿಗೆ ಸುಳ್ಳು ಹೇಳಿದ್ದಾರೆ . ಸೋಮವಾರ ತಮ್ಮ ಹೇಳಿಕೆಗೆ ಪೂರಕ ದಾಖಲೆಗಳನ್ನು ಸಂಸತ್ತಿಗೆ ಒದಗಿಸಬೇಕು. ಇಲ್ಲದಿದ್ದರೆ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಸುಳ್ಳು ಹೇಳುವ ರಕ್ಷಣಾ ಸಚಿವೆಯ ಸುಳ್ಳುಗಳು ಬಹಿರಂಗವಾಗುತ್ತಿವೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News