×
Ad

ಸಂವಾದವನ್ನು ರೆಕಾರ್ಡ್ ಮಾಡಿದ ವಿದ್ಯಾರ್ಥಿಯ ಬಂಧನಕ್ಕೆ ಆದೇಶಿಸಿದ ಮಹಾರಾಷ್ಟ್ರ ಸಚಿವ: ಆರೋಪ

Update: 2019-01-06 21:16 IST

ಮುಂಬೈ,ಜ.6: ರಾಜ್ಯದ ಶಿಕ್ಷಣ ಸಚಿವ ವಿನೋದ ತಾವ್ಡೆ ಮತ್ತು ಇನ್ನೋರ್ವ ವಿದ್ಯಾರ್ಥಿಯ ನಡುವಿನ ಮಾತುಕತೆಯನ್ನು ತಾನು ಧ್ವನಿಮುದ್ರಿಸಿಕೊಳ್ಳುತ್ತಿದ್ದ ಸಂದರ್ಭ ಸಚಿವರ ಆದೇಶದಂತೆ ತನ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಹಾರಾಷ್ಟ್ರದ ಅಮರಾವತಿಯ ಕಾಲೇಜು ವಿದ್ಯಾರ್ಥಿಯೋರ್ವ ಆರೋಪಿಸಿದ್ದಾನೆ.

ಸ್ಥಳೀಯ ಪೊಲೀಸರು ತನ್ನನ್ನು ಎರಡು ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದರು,ತನ್ನ ಸ್ಮಾರ್ಟ್ ಫೋನ್‌ನ್ನು ವಶಪಡಿಸಿಕೊಂಡಿದ್ದು,ಬಳಿಕ ವಾಪಸ್ ಮಾಡಿದ್ದಾರೆ ಎಂದೂ ಯುವರಾಜ ದಾಬಾಡ್ ಎಂಬ ಈ ವಿದ್ಯಾರ್ಥಿ ತಿಳಿಸಿದ.

ಶನಿವಾರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಭಾಷಣ ಮಾಡಿದ ಬಳಿಕ ತಾವ್ಡೆ ಅಲ್ಲಿಂದ ನಿರ್ಗಮಿಸುತ್ತಿದ್ದಾಗ ಕೆಲವು ವಿದ್ಯಾರ್ಥಿಗಳು ಅವರ ಕಾರಿನ ಬಳಿಗೆ ತೆರಳಿ ಉಚಿತ ಶಿಕ್ಷಣ ನೀತಿಯ ಬಗ್ಗೆ ಅವರ ಅಭಿಪ್ರಾಯವನ್ನು ಕೋರಿದ್ದರು.

ಶಿಕ್ಷಣದ ವೆಚ್ಚವನ್ನು ಭರಿಸಲಾಗದಿದ್ದರೆ ಎಲ್ಲಾದರೂ ಕೆಲಸ ಆರಂಭಿಸುವಂತೆ ತಾವ್ಡೆ ತನಗೆ ತಿಳಿಸಿದ್ದರು. ರಾಜ್ಯದಲ್ಲಿ ಉಚಿತ ಶಿಕ್ಷಣ ನೀತಿ ಜಾರಿಗೆ ಬರಬಹುದೇ ಎಂದು ತಾನು ಅವರನ್ನು ಪ್ರಶ್ನಿಸಿದ್ದೆ ಎಂದು ಕಾಲೇಜಿನ ಇನ್ನೋರ್ವ ವಿದ್ಯಾರ್ಥಿ ಪ್ರಶಾಂತ ರಾಠೋಡ್ ಸುದ್ದಿಗಾರರಿಗೆ ತಿಳಿಸಿದ. ದಾಬಾದ್ ತಮ್ಮ ನಡುವಿನ ಸಂವಾದವನ್ನು ಧ್ವನಿ ಮುದ್ರಿಸಿಕೊಳ್ಳುತ್ತಿದ್ದನ್ನು ಗಮನಿಸಿದ ಸಚಿವರು ಅದನ್ನು ನಿಲ್ಲಿಸುವಂತೆ ಸೂಚಿಸಿದ್ದರು ಮತ್ತು ನಂತರ ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು ಎಂದು ಆತ ವಿವರಿಸಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News