ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಲಭಿಸಿಲ್ಲ: ಸಿಬಿಐ

Update: 2019-01-06 17:25 GMT

ಹೊಸದಿಲ್ಲಿ,ಜ.6: ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧ ಸಮಯಮಿತಿಯೊಳಗೆ ಕಾನೂನು ಕ್ರಮವನ್ನು ಜರುಗಿಸುವುದು ತನ್ನ ಕೈಯಲ್ಲಿಲ್ಲ ಎಂದು ಸಿಬಿಐ ಶನಿವಾರ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ವಿಶೇಷ ನ್ಯಾಯಾಧೀಶ ಜೆ.ಕೆ.ಪಾಂಡ್ಯ ಅವರಿಗೆ ತಿಳಿಸಿತು.

ಡಿ.ಜಿ.ವಂಝಾರಾ ಮತ್ತು ಎನ್.ಕೆ.ಅಮೀನ್ ಅವರು ಆರೋಪಿ ಮಾಜಿ ಪೊಲೀಸ್ ಅಧಿಕಾರಿಗಳಲ್ಲಿ ಸೇರಿದ್ದಾರೆ.

ವಿಶೇಷ ನ್ಯಾಯಾಲಯವು ಆದೇಶಿಸಿದ ಬಳಿಕವಷ್ಟೇ ನಿವೃತ್ತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ತಾನು ಹೇಗೆ ಸರಕಾರದ ಅನುಮತಿಯನ್ನು ಕೋರಿದ್ದೆ ಎಂಬ ಕುರಿತು ತನ್ನ ನಿಲುವನ್ನೂ ಸಿಬಿಐ ಪುನರುಚ್ಚರಿಸಿತು.

ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ಗುಜರಾತ್ ಸರಕಾರದ ಅನುಮತಿಯನ್ನು ಕೋರುವ ಅಗತ್ಯವಿಲ್ಲ ಎನ್ನುವುದು ವಿಚಾರಣೆಯ ಆರಂಭದಿಂದಲೂ ಸಿಬಿಐನ ಸ್ಪಷ್ಟವಾದ ನಿಲುವಾಗಿತ್ತು. ಅನುಮತಿ ಪಡೆದುಕೊಳ್ಳುವಂತೆ ಈ ನ್ಯಾಯಾಲಯವು ಆದೇಶಿಸಿದ ಬಳಿಕವಷ್ಟೇ ಸಿಬಿಐ ಗುಜರಾತ್ ಸರಕಾರಕ್ಕೆ ಅರ್ಜಿಯನ್ನು ಸಲ್ಲಿಸಿತ್ತು ಎಂದು ಅದರ ಪರ ವಕೀಲ ಆರ್.ಸಿ.ಕೋಡೆಕರ್ ಅವರು ನ್ಯಾ.ಪಾಂಡ್ಯ ಅವರಿಗೆ ತಿಳಿಸಿದರು.

ಉತ್ತರಿಸಲು ಸರಕಾರವು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಅವರು,ಈ ವಿಷಯವನ್ನು ಉನ್ನತ ಮಟ್ಟದ ಅಧಿಕಾರಿಗಳು ನಿರ್ಧರಿಸಲಿರುವುದರಿಂದ ಸಿಬಿಐಗೆ ಆ ಬಗ್ಗೆ ತಿಳಿದಿಲ್ಲ ಎಂದು ಉತ್ತರಿಸಿದರು.

ಸಿಬಿಐ ಹೇಳಿಕೆಯ ವಿರುದ್ಧ ವಾದಿಸಿದ ವಂಝಾರಾ ಪರ ವಕೀಲರು ಪೊಲೀಸರು ಏಳು ಗುಜರಾತ್ ಪೊಲೀಸರ ವಿರುದ್ಧ 2013ರಲ್ಲಿ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಐದು ವರ್ಷಗಳು ಕಳೆದುಹೋಗಿವೆ. ಸಿಬಿಐ ಆರೋಪ ಪಟ್ಟಿಯನ್ನು ದಾಖಲಿಸುವ ಮೊದಲೇ ಅನುಮತಿಯನ್ನು ಪಡೆದುಕೊಳ್ಳಬೇಕಾಗಿತ್ತು, ಈಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಯದ ಮಿತಿ ಇದೆ. ಈಗಾಗಲೇ ಐದು ವರ್ಷಗಳು ಕಳೆದುಹೋಗಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News