ದಲಿತರನ್ನು ಓಲೈಸಲು ‘ಖಿಚಡಿ’ ಕಾರ್ಯಕ್ರಮ ಆಯೋಜಿಸಿದ ಬಿಜೆಪಿ

Update: 2019-01-06 17:38 GMT

ಹೊಸದಿಲ್ಲಿ, ಜ.6: ದಲಿತರನ್ನು ಓಲೈಸುವ ಉದ್ದೇಶದಿಂದ ಬಿಜೆಪಿ ರವಿವಾರ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ‘ಖಿಚಡಿ’ ಕಾರ್ಯಕ್ರಮದ ಬಗ್ಗೆ ಬಿಜೆಪಿಯ ದಲಿತ ಮುಖ ಎಂದೇ ಹೆಸರಾಗಿರುವ ಉದಿತ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   ಇಂತಹ ಕಾರ್ಯಕ್ರಮಗಳಿಂದ ಯಾವುದೇ ಚುನಾವಣಾ ಲಾಭವನ್ನು ನಿರೀಕ್ಷಿಸಲಾಗದು . ದಲಿತರೊಂದಿಗೆ ಸಹಭೋಜನ, ಖಿಚಡಿ ಅಥವಾ ಔತಣ ಕೂಟ ಇತ್ಯಾದಿ ಕಾರ್ಯಕ್ರಮಗಳು ಸಾಮಾಜಿಕ ಸಾಮರಸ್ಯಕ್ಕೆ ಪೂರಕವಾಗಿವೆ. ಆದರೆ ಇದು ಚುನಾವಣೆಯಲ್ಲಿ ಲಾಭವಾಗಿ ಬದಲಾಗದು ಎಂದು ವಾಯುವ್ಯ ದಿಲ್ಲಿ ಕ್ಷೇತ್ರದ ಸಂಸದ್ ಸದಸ್ಯ ಉದಿತ್ ರಾಜ್ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದಲಿತರನ್ನು ಓಲೈಸುವ ಕ್ರಮವಾಗಿ ಬಿಜೆಪಿ ‘ಭೀಮ್ ಮಹಾಸಮಾಗಮ’ ಅಥವಾ ಖಿಚಡಿ ಎಂಬ ಕಾರ್ಯಕ್ರಮವನ್ನು ರವಿವಾರ ಹಮ್ಮಿಕೊಂಡಿತ್ತು. 3 ಲಕ್ಷ ದಲಿತ ಕುಟುಂಬಗಳಿಂದ ಸಂಗ್ರಹಿಸಿದ ಅಕ್ಕಿ ಮತ್ತು ಬೇಳೆಯಿಂದ ತಯಾರಿಸಿದ ಖಿಚಡಿಯನ್ನು ಉಣಬಡಿಸುವ ಭೋಜನ ಕೂಟ ಇದಾಗಿದೆ . ಇಂತಹ ಕಾರ್ಯಕ್ರಮಗಳಿಂದ ದಲಿತ ಸಮುದಾಯದವರು ತಮ್ಮ ಹಳೆಯ ನೋವನ್ನು ಮತ್ತೆ ಸ್ಮರಿಸಿಕೊಳ್ಳುವಂತಾಗುತ್ತದೆ ಮತ್ತು ತಮ್ಮನ್ನು ಮತ್ತಷ್ಟು ದೂರ ಮಾಡಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ಸಮುದಾಯದ ಸುಶಿಕ್ಷಿತ ಮತ್ತು ಜಾಗೃತ ಜನತೆ ಈ ಕಾರ್ಯಕ್ರಮಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೂ ಇಂತಹ ಪ್ರಯತ್ನದಲ್ಲಿ ವಿಫಲರಾಗಿದ್ದರು ಎಂದು ಉದಿತ್ ರಾಜ್ ಹೇಳಿದ್ದಾರೆ. ಇದೀಗ ದಲಿತ ಸಮುದಾಯ ಅಧಿಕಾರ, ಆಡಳಿತ, ಉದ್ಯೋಗದಲ್ಲಿ ತಮ್ಮ ಪಾಲನ್ನು ಬಯಸುತ್ತಿದೆ. ಸರಕಾರಿ ಉದ್ಯೋಗದ ಪ್ರಮಾಣ ಕಡಿಮೆಯಾಗುತ್ತಿರುವುದು ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಖಾಸಗೀಕರಣ ಮತ್ತು ಸರಕಾರಿ ಉದ್ಯೋಗಗಳನ್ನು ಹೊರಗುತ್ತಿಗೆ ನೀಡುವ ಪ್ರಕ್ರಿಯೆ ತಮ್ಮನ್ನು ಮೂಲೆಗೊತ್ತುವ ಕ್ರಮವಾಗಿದೆ ಎಂದು ದಲಿತ ಸಮುದಾಯ ಭಾವಿಸುತ್ತಿದೆ ಎಂದು ಎಸ್ಸಿ/ಎಸ್ಟಿ ಸಂಘಟನೆಗಳ ಅಖಿಲ ಭಾರತ ಒಕ್ಕೂಟದ ಅಧ್ಯಕ್ಷರಾಗಿರುವ ಉದಿತ್ ರಾಜ್ ಹೇಳಿದ್ದಾರೆ. ಪ್ರಮುಖ ದಲಿತ ಹಕ್ಕುಗಳ ಹೋರಾಟಗಾರ ಎನಿಸಿಕೊಂಡಿರುವ ಉದಿತ್ ರಾಜ್ ತಮ್ಮನ್ನು ಪಕ್ಷ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬ ನೋವನ್ನು ಹೊರಗೆಡವಿದ್ದಾರೆ. 2014ಕ್ಕೂ ಮೊದಲು ತಾನು ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಟೀಕಿಸುತ್ತಿದ್ದೆ. ಆದರೆ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ತನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ. ದಲಿತ ಸಮುದಾಯದವರ ಸಮಸ್ಯೆಗಳನ್ನು ಆಲಿಸಿ, ಪಕ್ಷ ಮತ್ತು ದಲಿತ ಸಮುದಾಯದ ನಡುವಿನ ಕೊಂಡಿಯನ್ನು ಬಲಪಡಿಸುವ ಕಾರ್ಯವನ್ನು ತನಗೆ ವಹಿಸಿಲ್ಲ ಎಂಬ ಬೇಸರವಿದೆ ಎಂದು ರಾಜ್ ಹೇಳಿದ್ದಾರೆ.

ಆದರೆ ರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಿಲ್ಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ಖಿಚಡಿ ಕಾರ್ಯಕ್ರಮ ಸಾಮಾಜಿಕ ಸಾಮರಸ್ಯದ ಉದ್ದೇಶದಿಂದ ಆಯೋಜಿಸಲಾಗಿದೆ. ಇದು ವೋಟ್ ಬ್ಯಾಂಕ್ ರಾಜಕೀಯದ ಕಾರ್ಯಕ್ರಮವಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News