ದತ್ತಾಂಶ ರಕ್ಷಣೆ ಕಾನೂನು ಜಾರಿಗೆ ಚಿಂತನೆ: ರವಿಶಂಕರ್ ಪ್ರಸಾದ್

Update: 2019-01-06 17:40 GMT

ಹೊಸದಿಲ್ಲಿ, ಜ.6: ವೈಯಕ್ತಿಕ ಅಥವಾ ವೃತ್ತೀಯ ಕಾರ್ಯದ ಸೂಕ್ಷ್ಮ ದತ್ತಾಂಶಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರಕಾರ ಶೀಘ್ರವೇ ದತ್ತಾಂಶ ರಕ್ಷಣೆ ಕಾನೂನನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಕೇಂದ್ರದ ಕಾನೂನು ಮತ್ತು ನ್ಯಾಯ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ದತ್ತಾಂಶ ಮಾಹಿತಿಗಳನ್ನು ಗೂಗಲ್ ಮೂಲಕ ವಿದೇಶದಲ್ಲಿ ದುರುಪಯೋಗ ಪಡಿಸಿಕೊಳ್ಳದಂತೆ ರಕ್ಷಿಸುವ ಉದ್ದೇಶದಿಂದ ಕಾನೂನು ಜಾರಿಗೊಳಿಸಲಾಗುವುದು. ಈ ಮಾಹಿತಿಗಳ ದುರುಪಯೋಗ ಆಗಿರುವುದು ತಿಳಿದೊಡನೆ ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರಗಿಸಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದ್ದಾರೆ.

ಜಲಂಧರ್‌ನಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ 2019 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ತಂತ್ರಜ್ಞಾನ ಸಂಬಂಧಿತ ವ್ಯವಹಾರಗಳಿಗೆ ಈಗ ಭಾರತ ಮೂರನೇ ಅತ್ಯಂತ ನೆಚ್ಚಿನ ಹೂಡಿಕೆ ತಾಣವಾಗಿದೆ. ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ 2015ರಲ್ಲಿ 81ನೇ ಸ್ಥಾನದಲ್ಲಿದ್ದ ಭಾರತ 2017ರಲ್ಲಿ 60ನೇ ಸ್ಥಾನಕ್ಕೆ ಏರಿದೆ. ಅಲ್ಲದೆ ವೈಜ್ಞಾನಿಕ ಪ್ರಕಟಣೆಯಲ್ಲಿ ವಿಶ್ವದಲ್ಲಿ 6ನೇ ಸ್ಥಾನ, ಪೇಟೆಂಟ್ ದಾಖಲಿಸುವುದರಲ್ಲಿ ವಿಶ್ವದಲ್ಲಿ 10ನೇ ಸ್ಥಾನ ಪಡೆದಿದೆ ಎಂದರು.

ಕಳೆದ ಐದು ವರ್ಷಗಳಲ್ಲಿ ಡಿಜಿಟಲ್ ವ್ಯವಹಾರ 8 ಪಟ್ಟು ಹೆಚ್ಚಿದ್ದು 2,070 ಕೋಟಿ ರೂ.ಗೆ ತಲುಪಿದೆ. ಸಕ್ರಿಯ ಆಧಾರ್ ಮೂಲಕ ನಡೆಸಲಾಗುವ ಪಾವತಿ ವ್ಯವಹಾರದಲ್ಲಿ 2048 ಶೇಕಡಾ ಹೆಚ್ಚಳವಾಗಿದೆ. ಯುಪಿಐ(ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ವ್ಯವಹಾರ ಕಳೆದ 24 ತಿಂಗಳಲ್ಲಿ 1500 ಪಟ್ಟು ಅಧಿಕವಾಗಿದೆ ಎಂದವರು ಹೇಳಿದರು. ಇದೇ ಸಂದರ್ಭದಲ್ಲಿ ವಿಜ್ಞಾನ ಸಂವಹನಗಾರರ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಸಚಿವರು ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News