ಪ್ಲಿಸ್ಕೊವಾಗೆ ಮಹಿಳಾ ಸಿಂಗಲ್ಸ್ ಗರಿ

Update: 2019-01-06 18:00 GMT

ಬ್ರಿಸ್ಬೇನ್(ಆಸ್ಟ್ರೇಲಿಯ), ಜ.6: ತಮ್ಮ ಎಲ್ಲ ಅನುಭವವನ್ನು ಸಮರ್ಪಕವಾಗಿ ಬಳಸಿಕೊಂಡ ಝೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ, ಉಕ್ರೇನ್‌ನ ಲೇಸಾ ಸುರೆಂಕೊ ಅವರನ್ನು 4-6, 7-5, 6-2 ಸೆಟ್‌ಗಳಿಂದ ಬಗ್ಗುಬಡಿದು ಬ್ರಿಸ್ಬೇನ್ ಅಂತರ್‌ರಾಷ್ಟ್ರೀಯ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಇದು ಅವರ ಎರಡನೇ ಬ್ರಿಸ್ಬೇನ್ ಪ್ರಶಸ್ತಿ. ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಪ್ರಥಮ ಸೆಟ್‌ನ್ನು 4-6ರಿಂದ ಸೋತರೂ ಛಲಬಿಡದೆ ಮುನ್ನುಗ್ಗಿದ್ದು ಫಲ ನೀಡಿತು. ತನ್ನ ವೃತ್ತಿಜೀವನದ ಜೀವನಶ್ರೇಷ್ಠ ಗೆಲುವಿನ ಆಸೆ ಹೊಂದಿದ್ದ ಶ್ರೇಯಾಂಕರಹಿತ ಆಟಗಾರ್ತಿ ಸುರೆಂಕೊ ಎರಡನೇ ಸೆಟ್‌ನ ಆರಂಭದಲ್ಲಿ 5-4 ಗೇಮ್‌ಗಳಿಂದ ಮುಂದಿದ್ದರು. ನಂತರ ಪ್ಲಿಸ್ಕೊವಾ ರಾಕೆಟ್ ವೇಗಕ್ಕೆ ಬಿರುಗಾಳಿ ಸ್ಪರ್ಶ ನೀಡಿ ಸೆಟ್‌ನಲ್ಲಿ ಮುನ್ನಡೆ ಪಡೆದರು.

ಆರಂಭದಲ್ಲಿ ನಿಧಾನವಾಗಿ ಆಟ ಆರಂಭಿಸಿದ ಟೂರ್ನಿಯ 5ನೇ ಶ್ರೇಯಾಂಕಿತೆ ಪ್ಲಿಸ್ಕೊವಾ ಅದಕ್ಕೆ ತಕ್ಕ ಬೆಲೆ ತೆತ್ತರು. ಆನಂತರ ಬೇಸ್‌ಲೈನ್ ಹೊಡೆತಗಳಿಂದ ವಿಜಯಿ ಆಟಗಾರ್ತಿ ರಂಜಿಸಿದರು.

ಒಟ್ಟು 2 ತಾಸು 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ಲಿಸ್ಕೊವಾ ಪಾರಮ್ಯ ಮೆರೆದರು. ಇದು ಅವರ 12ನೇ ಅಂತರ್‌ರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ಮುಂಬರುವ ಆಸ್ಟ್ರೇಲಿಯ ಓಪನ್‌ಗೆ ತಯಾರಾಗಲು ಇದು ಅನುಕೂಲವಾಗಿದೆ.

2016ರ ಯುಎಸ್ ಓಪನ್‌ನಲ್ಲಿ ಆ್ಯಂಜೆಲಿಕ್ ಕೆರ್ಬರ್ ವಿರುದ್ಧ ಸೋತು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದು ಪ್ರಮುಖ ಟೂರ್ನಿಗಳಲ್ಲಿ ಪ್ಲಿಸ್ಕೊವಾ ಅವರ ಮಹತ್ಸಾಧನೆೆಯಾಗಿದೆ.

ಪುರುಷರ ಸಿಂಗಲ್ಸ್ ಗೆ ನಿಶಿಕೋರಿ ದೊರೆ

ಬ್ರಿಸ್ಬೇನ್, ಜ.6: ರಶ್ಯದ ಡ್ಯಾನಿಲ್ ಮೆಡ್ವಡೆವ್ ಅವರನ್ನು 6-4, 3-6, 6-2ರಿಂದ ಮಣಿಸಿದ ಜಪಾನ್‌ನ ಟೆನಿಸ್ ತಾರೆ ಕಿ ನಿಶಿಕೋರಿ ರವಿವಾರ ಬ್ರಿಸ್ಬೇನ್ ಓಪನ್ ಅಂತರ್‌ರಾಷ್ಟ್ರೀಯ ಪುರುಷರ ಸಿಂಗಲ್ಸ್ ಕಿರೀಟ ಧರಿಸಿ ಮಿಂಚಿದರು. ಇದು ನಿಶಿಕೋರಿ ಅವರಿಗೆ 2016ರ ನಂತರ ದೊರೆತ ಮೊದಲ ಪ್ರಶಸ್ತಿಯಾಗಿದೆ. 2016ರಲ್ಲಿ ಮೆಂಪಿಸ್ ಟೂರ್ನಿಯನ್ನು ಗೆದ್ದುಕೊಂಡ ನಂತರ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿದ್ದ ನಿಶಿಕೋರಿ, 2018ರ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು. 2017ರ ಬ್ರಿಸ್ಬೇನ್ ಓಪನ್‌ನಲ್ಲಿ ರನ್ನರ್‌ಅಪ್‌ಗೆ ತೃಪ್ತಿಪಟ್ಟಿದ್ದ ಅವರು ಈ ಬಾರಿ ಪ್ರಶಸ್ತಿ ಮಾಲೆಗೆ ಕೊರಳೊಡ್ಡಿದರು. ಪ್ರಥಮ ಸೆಟ್‌ನ್ನು 42 ನಿಮಿಷಗಳ ಹೋರಾಟದಲ್ಲಿ ಗೆದ್ದುಕೊಂಡ ನಿಶಿಕೋರಿ, ಎರಡನೇ ಸೆಟ್‌ನ್ನು ಮೆಡ್ವಡೆವ್‌ಗೆ ಒಪ್ಪಿಸಿದರು. ಎರಡನೇ ಸೆಟ್‌ನಲ್ಲಿ ನಿಶಿಕೋರಿ ಅವರ ಕೆಲವು ಕಳಪೆ ಸರ್ವ್‌ಗಳ ಲಾಭ ಪಡೆದ ರಶ್ಯನ್ ಆಟಗಾರ ಮುನ್ನುಗ್ಗಿ, ಸೆಟ್ ಗೆದ್ದುಕೊಂಡರು.

ಅಂತಿಮವಾಗಿ ಮೂರನೇ ಸೆಟ್‌ನ್ನು 6-2ರಿಂದ ಸುಲಭವಾಗಿ ಗೆದ್ದ ನಿಶಿಕೋರಿ ಪ್ರಶಸ್ತಿಯನ್ನು ತಮ್ಮಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News