ಡು ಪ್ಲೆಸಿಸ್‌ಗೆ ಒಂದು ಟೆಸ್ಟ್ ಅಮಾನತು ಶಿಕ್ಷೆ
Update: 2019-01-06 23:49 IST
ಕೇಪ್‌ಟೌನ್, ಜ.6: ಪಾಕಿಸ್ತಾನ ತಂಡದ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ದ.ಆಫ್ರಿಕ ಕ್ರಿಕೆಟ್ ತಂಡದ ನಾಯಕ ಎಫ್ ಡು ಪ್ಲೆಸಿಸ್‌ಗೆ ಐಸಿಸಿ ಒಂದು ಟೆಸ್ಟ್‌ನಿಂದ ಅಮಾನತು ಹಾಗೂ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಿದೆ. ದ.ಆಫ್ರಿಕ ತಂಡದ ಇತರ ಆಟಗಾರರಿಗೆ ಪಂದ್ಯ ಶುಲ್ಕದ ಶೇ.10ರಷ್ಟು ದಂಡ ವಿಧಿಸಲಾಗಿದೆ.
ಪಂದ್ಯದ ನಿಗದಿತ ಸಮಯ ಮುಗಿದಾಗ ಹರಿಣಗಳ ತಂಡ ಇನ್ನು ಒಂದು ಓವರ್ ಎಸೆಯಲು ಬಾಕಿಯಿದ್ದ ಕಾರಣ ಐಸಿಸಿ ರೆಫರಿಗಳ ತಜ್ಞರ ಸಮಿತಿಯ ಡೇವಿಡ್ ಬೂನ್ ಈ ಅಮಾನತು ಶಿಕ್ಷೆಯನ್ನು ಜಾರಿಗೊಳಿಸಿದ್ದಾರೆ.
ಈ ಶಿಕ್ಷೆಯಿಂದಾಗಿ ಡು ಪ್ಲೆಸಿಸ್ ಪಾಕಿಸ್ತಾನದ ವಿರುದ್ಧ ಜ.11ರಂದು ಆರಂಭವಾಗುವ ಮೂರನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. 2018 ಜ.17ರಂದು ಭಾರತದ ವಿರುದ್ಧ ಸೆಂಚೂರಿಯನ್‌ನಲ್ಲಿ ಮುಕ್ತಾಯಗೊಂಡ ಟೆಸ್ಟ್‌ನಲ್ಲೂ ಡು ಪ್ಲೆಸಿಸ್ ಇದೇ ವಿಚಾರದಲ್ಲಿ ತಪ್ಪಿತಸ್ಥರಾಗಿದ್ದರು.