ಇವಿಎಂನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ: ಅಮಿತ್ ಶಾಗೆ ಶಿವಸೇನೆ ತಿರುಗೇಟು

Update: 2019-01-07 15:07 GMT

ಮುಂಬೈ, ಜ. 7: ಹಿಂದುತ್ವವನ್ನು ನಂಬುವವರೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬದಲಾಗಿ ಅದು ಇವಿಎಂನೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಶಿವಸೇನೆ ಹೇಳಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೇ ಇದ್ದರೆ, ಶಿವಸೇನೆಗೆ ಮಹಾರಾಷ್ಟ್ರದಲ್ಲಿ ಸೋಲಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಶಿವಸೇನೆ ಈ ಪ್ರತಿಕ್ರಿಯೆ ನೀಡಿದೆ. ಪಕ್ಷದ ವರಿಷ್ಠ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿರುವುದು ಹಾಗೂ ರಾಮ ಮಂದಿರದ ಬಗೆಗಿನ ಅವರ ನಿಲುವು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ ಎಂದು ಸೇನೆ ಹೇಳಿದೆ.

ಪಕ್ಷದ ಕಾರ್ಯಕರ್ತರು ಮೈತ್ರಿ ಬಗ್ಗೆ ಚಿಂತೆ ಮಾಡಬಾರದು. ಬದಲಾಗಿ ಪ್ರತಿಪಕ್ಷವನ್ನು ಬುಡಮೇಲು ಮಾಡಲು ಸಿದ್ಧರಾಗಬೇಕು. 11 ಕೋಟಿ ಕಾರ್ಯಕರ್ತರಿರುವ ಬಿಜೆಪಿಯನ್ನು ಯಾರೊಬ್ಬರೂ ಸೋಲಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ನಾವು ಸ್ಪರ್ಧಿಸಲಿದ್ದೇವೆ ಹಾಗೂ ಎಲ್ಲ ಸ್ಥಾನಗಳಲ್ಲಿ ವಿಜಯಿಯಾಗಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳ ಪರವಾಗಿ ಶಕ್ತಿಮೀರಿ ಕಾರ್ಯ ನಿರ್ವಹಿಸಬೇಕು ಎಂದು ಶಾ ಹೇಳಿದ್ದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲದೆ ಸ್ಪರ್ಧಿಸಲು ಸಿದ್ಧರಾಗಬೇಕು ಎಂದು ಕಳೆದ ಗುರುವಾರ ಅಮಿತ್ ಶಾ ಮಹಾರಾಷ್ಟ್ರದ ಬಿಜೆಪಿ ಸಂಸದರಿಗೆ ತಿಳಿಸಿದ್ದರು. ನಗರದ ಲಾತೂರ್, ನಾಂದೇಡ್, ಉಸ್ಮಾನಾಬಾದ್ ಹಾಗೂ ಹಂಗೋಲಿಯಲ್ಲಿ ಅಮಿತ್ ಶಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬೂತ್ ‌ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News