7 ದಿನ ಮುಂಚಿತ ನೋಟಿಸ್ ನೀಡದೆ ನಡೆಸುವ ಹರತಾಳಕ್ಕೆ ಕೇರಳ ಹೈಕೋರ್ಟ್ ನಿಷೇಧ

Update: 2019-01-07 17:05 GMT

ತಿರುವನಂತಪುರ, ಜ. 7: ಕನಿಷ್ಠ ಏಳು ದಿನ ಮುಂಚಿತವಾಗಿ ಘೋಷಿಸದ ಬಂದ್‌ಗೆ ಕೇರಳ ಉಚ್ಚ ನ್ಯಾಯಾಲಯ ನಿಷೇಧ ವಿಧಿಸಿದೆ. ಈ ಏಳು ದಿನಗಳ ಕಾಲಾವಕಾಶದಲ್ಲಿ ಯಾವುದೇ ಪ್ರಜೆ ಬಂದ್ ಅನ್ನು ಪ್ರಶ್ನಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಏಳು ದಿನಕ್ಕಿಂತ ಮುಂಚಿತವಾಗಿ ನೋಟಿಸು ನೀಡದೆ ಹರತಾಳ ಆಯೋಜಿಸುವುದು ಅಸಾಂವಿಧಾನಿಕ ಎಂದು ಮುಖ್ಯ ನ್ಯಾಯಮೂರ್ತಿ ಹೃಷಿಕೇಶ್ ಹಾಗೂ ನ್ಯಾಯಮೂರ್ತಿ ಎ.ಕೆ. ಜಯಶಂಕರನ್ ನಂಬಿಯಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.

ಜನವರಿ 2ರಂದು ಶಬರಿಮಲೆ ದೇವಾಲಯಕ್ಕೆ ಋತುಚಕ್ರ ವಯಸ್ಸಿನ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ವಿರೋಧಿಸಿ ಶಬರಿಮಲೆ ಕ್ರಿಯಾ ಸಮಿತಿ ಕರೆ ನೀಡಿದ್ದ ಹರತಾಳದ ಸಂದರ್ಭ ರಾಜ್ಯಾದ್ಯಂತ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಈ ಆದೇಶ ಜಾರಿ ಮಾಡಲಾಗಿದೆ. ಕೇರಳಾದ್ಯಂತ ನಡೆದ ಹಿಂಸಾಚಾರ ಹಾಗೂ ದಾಂಧಲೆಗೆ ಸಂಬಂಧಿಸಿ 3000ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಬಂದ್‌ಗಳ ವಿರುದ್ಧ ಉಚ್ಚ ನ್ಯಾಯಾಲಯದ ಮೊರೆ ಹೋಗಿರುವ ಕೇರಳ ಚೇಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಕಳೆದ ವರ್ಷ ರಾಜ್ಯದಲ್ಲಿ 97 ಹರತಾಳಗಳನ್ನು ನಡೆಸಲಾಗಿದೆ. ಇದು ಉದ್ಯಮ ಹಾಗೂ ಕಾರ್ಮಿಕರ ದೈನಂದಿನ ಜೀವನದ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ ಎಂದು ಹೇಳಿದೆ.

ಹರತಾಳದ ಎಲ್ಲಾ ದಿನಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರಕಾರಿ ಕಚೇರಿ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಈ ದೂರಿನ ಪ್ರತಿಕ್ರಿಯೆದಾರರು. ಹರತಾಳದ ಸಂದರ್ಭ ಅಂಗಡಿ ಹಾಗೂ ಉದ್ಯಮಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಈ ದೂರಿದಲ್ಲಿ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News