ವಿವಾಹ ವಿಚ್ಛೇದನಕ್ಕೆ ಕಾರಣಗಳಿಂದ ಕುಷ್ಠರೋಗ ಕೈಬಿಡುವ ಮಸೂದೆ ಲೋಕಭೆಯಲ್ಲಿ ಅಂಗೀಕಾರ
ಹೊಸದಿಲ್ಲಿ,ಜ.7: ವಿವಾಹ ವಿಚ್ಛೇದನವನ್ನು ಪಡೆಯಬಹುದಾದ ಕಾರಣಗಳ ಪಟ್ಟಿಯಿಂದ ಕುಷ್ಠರೋಗವನ್ನು ಕೈಬಿಡಲು ಉದ್ದೇಶಿಸಿರುವ ಮಸೂದೆಯು ಸೋಮವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.
ಈ ಹಿಂದೆ ಕುಷ್ಠರೋಗವು ಗುಣವಾಗದ ಕಾಯಿಲೆ ಎಂಬ ನಂಬಿಕೆಯಿತ್ತಾದರೂ ಅದನ್ನೀಗ ಗುಣಪಡಿಸ ಬಹುದಾದ್ದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ಕಾನೂನು ಸಚಿವ ಪಿ.ಪಿ.ಚೌಧರಿ ಅವರು 'ವೈಯಕ್ತಿಕ ಕಾನೂನುಗಳು(ತಿದ್ದುಪಡಿ) ಮಸೂದೆ,2018'ರ ಮೇಲಿನ ಚರ್ಚೆಗೆ ಉತ್ತರಿಸುತ್ತ ತಿಳಿಸಿದರು.
ಹಿಂದು,ಮಸ್ಲಿಂ ಮತ್ತು ಕ್ರೈಸ್ತರಿಗೆ ಸಂಬಂಧಿಸಿದ ಐದು ವೈಯಕ್ತಿಕ ಕಾನೂನುಗಳಿಂದ ವಿವಾಹ ವಿಚ್ಛೇದನಕ್ಕೆ ಕುಷ್ಠರೋಗ ಕಾರಣವನ್ನು ಕೈಬಿಡಲು ಮಸೂದೆಯು ಉದ್ದೇಶಿಸಿದೆ.
ರಫೇಲ್ ಮತ್ತು ಸಿಬಿಐ ಕುರಿತು ಪ್ರತಿಪಕ್ಷಗಳ ಪ್ರತಿಭಟನೆಯ ಗದ್ದಲಗಳ ನಡುವೆಯೇ ಧ್ವನಿಮತದಿಂದ ಮಸೂದೆಯನ್ನು ಅಂಗೀಕರಿಸಲಾಯಿತು. ವಿವಾಹ ವಿಚ್ಛೇದನಕ್ಕೆ ಕುಷ್ಠರೋಗ ಕಾರಣವು ತಾರತಮ್ಯದಿಂದ ಕೂಡಿದೆ ಎಂದು ಚೌಧರಿ ತಿಳಿಸಿದರು. ಮಾನವ ಹಕ್ಕುಗಳ ಆಯೋಗ ಮತ್ತು ವಿವಿಧ ನ್ಯಾಯಾಲಯಗಳೂ ತಮ್ಮ ತೀರ್ಪುಗಳಲ್ಲಿ ಈ ತಾರತಮ್ಯವನ್ನು ನಿವಾರಿಸಲು ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯಕ್ಕೆ ಒತ್ತು ನೀಡಿದ್ದವು.
2018,ಆಗಸ್ಟ್‌ನಲ್ಲಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.