"ರಫೇಲ್ ಕುರಿತ ರಕ್ಷಣಾ ಸಚಿವರ ಭಾಷಣ ಭಾಷಾಂತರಿಸಿ, ವಿರೋಧ ಪಕ್ಷಗಳ ಪ್ರಶ್ನೆ ಕಡೆಗಣಿಸಿ"

Update: 2019-01-07 17:14 GMT

ರಫೇಲ್ ಯುದ್ಧವಿಮಾನ ಖರೀದಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿರೋಧ ಪಕ್ಷಗಳ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಆಪಾದಿಸಿದ ಬೆನ್ನಲ್ಲೇ, ಒಪ್ಪಂದವನ್ನು ಸಮರ್ಥಿಸಿಕೊಂಡು ಸಚಿವರು ಮಾಡಿದ ಭಾಷಣವನ್ನು ಭಾಷಾಂತರಿಸುವಂತೆ ಮತ್ತು ವಿರೋಧ ಪಕ್ಷಗಳ ಸಂಸದರ ಪ್ರಶ್ನೆಗಳು ಹಾಗೂ ಅಭಿಪ್ರಾಯಗಳನ್ನು ಕೈಬಿಡುವಂತೆ ಪ್ರಸಾರ ಭಾರತಿ ಎಲ್ಲ ಆಕಾಶವಾಣಿ ಕೇಂದ್ರಗಳಿಗೆ ಸೂಚನೆ ನೀಡಿದೆ ಎಂದು thewire.in ವರದಿ ಮಾಡಿದೆ.

ಸೀತಾರಾಮನ್ ಅವರ ಭಾಷಣವನ್ನು ಭಾಷಾಂತರಿಸುವಂತೆ ಆಲ್ ಇಂಡಿಯಾ ರೇಡಿಯೊ ಮಹಾನಿರ್ದೇಶಕರು ಜನವರಿ 5ರಂದು ಗುವಾಹಟಿ, ಹೈದರಾಬಾದ್, ಕೊಲ್ಕತ್ತಾ, ಚಂಡೀಗಢ, ಶ್ರೀನಗರ, ಚೆನ್ನೈ, ಬೆಂಗಳೂರು ಮತ್ತು ತಿರುವನಂತಪುರ ಆಕಾಶವಾಣಿ ಕಾರ್ಯಕ್ರಮ ವಿಭಾಗಗಳಿಗೆ ಆದೇಶ ನೀಡಿದ್ದಾರೆ. ಮಧ್ಯರಾತ್ರಿಯ ಒಳಗಾಗಿ ಸಚಿವರ ಭಾಷಣದ ಪ್ರತಿ ನಿಮ್ಮ ಇ-ಮೇಲ್ ವಿಳಾಸಗಳಿಗೆ ತಲುಪಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಭಾಷಾಂತರಿತ ಪ್ರತಿಗಳನ್ನು ಸೋಮವಾರ ಮುಂಜಾನೆ 11 ಗಂಟೆಯ ಒಳಗಾಗಿ ದಿಲ್ಲಿಗೆ ಮರಳಿಸುವಂತೆ ಎಲ್ಲ ಪ್ರಮುಖ ನಿಲ್ದಾಣಗಳಿಗೆ ಸೂಚನೆ ನೀಡಲಾಗಿದೆ. ಇದರ ಪ್ರತಿಯನ್ನು ಪ್ರಧಾನಮಂತ್ರಿಯವರ ‘ಮನ್ ಕಿ ಬಾತ್’ ಇ-ಮೇಲ್ ಐಡಿಗೆ ಕೂಡಾ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು thewire.in ವರದಿ ತಿಳಿಸಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಉನ್ನತ ಮೂಲಗಳ ಪ್ರಕಾರ, ಕೇವಲ ಸಚಿವರ ಭಾಷಣವನ್ನು ಮಾತ್ರ ಭಾಷಾಂತರಿಸಲು ಸೂಚಿಸಲಾಗಿದೆ. ಇತರ ಗೌರವಾನ್ವಿತ ಸದಸ್ಯರ ಪ್ರಶ್ನೆಗಳು ಮತ್ತು ಅಭಿಪ್ರಾಯಗಳನ್ನು ಅಥವಾ ಗೌರವಾನ್ವಿತ ಸ್ಪೀಕರ್ ಅವರ ಅಭಿಪ್ರಾಯಗಳನ್ನು ಭಾಷಾಂತರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜನವರಿ 8ರಿಂದ ಪ್ರಸಾರ ಭಾರತಿ ತನ್ನ ನೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಮಾಡುತ್ತಿದ್ದು, ಆಕಾಶವಾಣಿಯ ಸುದ್ದಿಗಳನ್ನು ಎಫ್‍ಎಫ್ ರೇಡಿಯೊ ಸ್ಟೇಷನ್ ‍ಗಳು ಕೂಡಾ ದೇಶಾದ್ಯಂತ ಪ್ರಸಾರ ಮಾಡಲು ಅನುವಾಗುವಂತೆ ಹಂಚಿಕೊಳ್ಳಲು ನಿರ್ಧರಿಸಿದೆ. ಇದುವರೆಗೆ ಆಕಾಶವಾಣಿ ಸುದ್ದಿಗಳ ಅಂಶಗಳನ್ನು ಎಫ್‍ಎಂ ರೇಡಿಯೊಗಳು ಪ್ರಸಾರ ಮಾಡುವುದಕ್ಕೆ ನಿಷೇಧವಿತ್ತು. ಭಾಷಾಂತರಿತ ಸುದ್ದಿಗಳನ್ನು ನೀಡಿದ ಮರುದಿನದಿಂದ ಈ ಹೊಸ ವ್ಯವಸ್ಥೆ ಆರಂಭವಾಗುತ್ತಿದೆ ಎನ್ನುವುದು ಗಮನಾರ್ಹ.

ಆಕಾಶವಾಣಿಯ ಮೂಲಗಳ ಪ್ರಕಾರ, ಸುದ್ದಿ ವಿಭಾಗದಲ್ಲಿ ಭಾಷಾಂತರಕಾರರ ತಂಡ ಕೂಡಾ ಇದ್ದರೂ, ಇವರನ್ನು ಈ ಗುಂಪಿನಿಂದ ಹೊರಗಿಟ್ಟಿರುವುದರಿಂದ, ಕಾರ್ಯಕ್ರಮ ವಿಭಾಗವು, ಹವ್ಯಾಸಿ ಭಾಷಾಂತರಕಾರರನ್ನು ದೈನಿಕ ಆಧಾರದಲ್ಲಿ ನಿಯೋಜಿಸಿಕೊಳ್ಳಬೇಕಾಗಿದೆ.

ಸಚಿವರ ಸಮರ್ಥನೆಗಾಗಿ?

ಶುಕ್ರವಾರ ಅಂದರೆ ಜನವರಿ 4ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ರಫೇಲ್ ಹಗರಣದ ಸಂಬಂಧ ವಾಗ್ವಾದ ನಡೆಸಿದ್ದರು ಹಾಗೂ ಇದು ವಾರಾಂತ್ಯದಲ್ಲಿ ಟ್ವಿಟ್ಟರ್ ಖಾತೆಗಳಲ್ಲೂ ಮಾರ್ದನಿಸಿತು.

ವಿವಾದಾತ್ಮಕ ಒಪ್ಪಂದದ ಬಗೆಗಿನ ವಿರೋಧ ಪಕ್ಷಗಳ ಟೀಕೆಯನ್ನು ಮುಂದುವರಿಸಿದ ಕಾಂಗ್ರೆಸ್ ಅಧ್ಯಕ್ಷರು ಎಸೆದಿದ್ದ ಸವಾಲಿಗೆ ಪ್ರತಿಯಾಗಿ ರಕ್ಷಣಾ ಸಚಿವೆ 150 ನಿಮಿಷಗಳ ಸುಧೀರ್ಘ ಭಾಷಣ ಮಾಡಿ, ಒಪ್ಪಂದವನ್ನು ಸಮರ್ಥಿಸಿಕೊಂಡಿದ್ದರು. ಇದರಲ್ಲಿ ಸಚಿವೆಯ ಮಧ್ಯಮವರ್ಗದ ಹಿನ್ನೆಲೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹಿನ್ನೆಲೆ ಬಗ್ಗೆಯೂ ಉಲ್ಲೇಖವಿತ್ತು. ಕಾಂಗ್ರೆಸ್ ಪಕ್ಷಕ್ಕೆ ಕಾರ್ಮೋಡವಾಗಿ ಬೊಫೋರ್ಸ್ ಹಗರಣ ಕಾಡಿತ್ತು ಮತ್ತು ರಫೇಲ್ ಒಪ್ಪಂದವನ್ನು ಯಶಸ್ವಿಯಾಗಿ ಪೂರೈಸಲು ಯುಪಿಎ ಸರ್ಕಾರ ವಿಫಲವಾದದ್ದು ಹಣ ಪಡೆಯಲು ಸಾಧ್ಯವಾಗದ ಕಾರಣಕ್ಕಾಗಿ ಎಂದು ಸಚಿವೆ ಆಪಾದಿಸಿದ್ದರು.

ಬಂಡವಾಳಶಾಹಿಗಳಿಗೆ ಮಣೆಹಾಕುತ್ತಿರುವ ಬಿಜೆಪಿ ಸರ್ಕಾರ, ಈ ಒಪ್ಪಂದದಲ್ಲಿ ಆಫ್ ಸೆಟ್ ಪಾಲುದಾರ ಕಂಪನಿಯ ಮುಖ್ಯಸ್ಥರಾಗಿರುವ ಅನಿಲ್ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಕಂಪನಿಯನ್ನು ಕಡೆಗಣಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ, "ಎಚ್‍ಎಎಲ್‍ ಗೆ ಒಂದು ಲಕ್ಷ ಕೋಟಿ ರೂಪಾಯಿ ವಹಿವಾಟು ತಂದುಕೊಡುವ ಒಪ್ಪಂದಗಳು ಅಂತಿಮಗೊಳ್ಳುವ ಹಂತದಲ್ಲಿವೆ" ಎಂದು ಪ್ರತಿಕ್ರಿಯಿಸಿದ್ದರು.

ರಾಹುಲ್‍ ಗಾಂಧಿಯವರು ಅಷ್ಟೇ ದೃಢವಾಗಿ ಸೀತಾರಾಮನ್ ವಾದವನ್ನು ಅಲ್ಲಗಳೆದಿದ್ದು, "ನೀವು ಎರಡೂವರೆ ಗಂಟೆ ಮಾತನಾಡಿದರೂ, ಅನಿಲ್ ಅಂಬಾನಿ ಆಫ್‍ ಸೆಟ್ ಗುತ್ತಿಗೆ ಪಡೆದಿರುವುದು ಹೇಗೆ ಎಂಬ ಬಗ್ಗೆ ಏನನ್ನೂ ಹೇಳಿಲ್ಲ" ಎಂದು ಕಾಲೆಳೆದಿದ್ದರು. ಪ್ರಧಾನಿ ಮೋದಿಯವರ ಸೂಚನೆ ಮೇರೆಗೆ ಅಂಬಾನಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ಲಾ ಒಲಾಂಡ್ ಹೇಳಿದ್ದನ್ನು ರಾಹುಲ್ ಉಲ್ಲೇಖಿಸಿದರು. "ಈ ಬಗ್ಗೆ ನಿಮ್ಮಲ್ಲಿ ನಾವು ಪ್ರಶ್ನೆ ಹಾಕಿದ್ದೆವು. ಆದರೆ ಅದಕ್ಕೆ ನೀವು ಉತ್ತರಿಸಿಲ್ಲ" ಎಂದು ರಾಹುಲ್ ಹೇಳಿದ್ದರು.

ವಾರಾಂತ್ಯದಲ್ಲಿ ವಿರೋಧ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಪ್ರಚುರಪಡಿಸಿ, ಪ್ರಧಾನಿಯಿಂದ ಎರಡು ಸರಳ ಪ್ರಶ್ನೆಗಳಿಗೆ ಉತ್ತರ ಬಯಸಿದ್ದವು. ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸರ್ಕಾರಕ್ಕೆ ಎರಡು ಸರಳ ಪ್ರಶ್ನೆಗಳನ್ನು ಕೇಳಿದ್ದರು.

ಪ್ರಶ್ನೆ 1: ಅನಿಲ್ ಅಂಬಾನಿ ಗುತ್ತಿಗೆ ಪಡೆದಿರುವುದು ಹೇಗೆ ಮತ್ತು ಎಚ್‍ಎಎಲ್ ಬದಲಾಗಿ ಅವರಿಗೆ ಗುತ್ತಿಗೆ ನೀಡಲು ನಿರ್ಧರಿಸಿದವರು ಯಾರು?

ಪ್ರಶ್ನೆ 2: ಪ್ರಧಾನಿ ಹೊಸ ಒಪ್ಪಂದ ಮಾಡಿಕೊಳ್ಳಲು ಮುಂದಾದಾಗ, ರಕ್ಷಣಾ ಸಚಿವಾಲಯದ ಅಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರೇ ಹಾಗೂ ಇಂಥ ವಿಚಾರದಲ್ಲಿ ರಕ್ಷಣಾ ಸಚಿವಾಲಯದ ನಿರ್ಧಾರವನ್ನು ಪ್ರಧಾನಿ ಮೀರಲು ಅವಕಾಶವಿದೆಯೇ?

ವಿರೋಧ ಪಕ್ಷಗಳ ಈ ಪ್ರತಿದಾಳಿಯ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ನಿರ್ಮಲಾ ಸೀತಾರಾಮನ್ ಅವರ ಭಾಷಣವನ್ನು ಬಹುಭಾಷೆಗಳಿಗೆ ಭಾಷಾಂತರಿಸುವಂತೆ ಆದೇಶಿಸಿದೆ ಎಂದು ಹೇಳಲಾಗಿದೆ.

ಪ್ರಸಾರ ತರಂಗ ವಶಕ್ಕೆ

ಈ ಭಾಷಾಂತರಿತ ಭಾಷಣವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಆಕಾಶವಾಣಿ ಅಧಿಕಾರಿಗಳು ಬಾಯಿ ಬಿಟ್ಟಿಲ್ಲವಾದರೂ, ಮಂಗಳವಾರದ ಬಳಿಕ, ಆಕಾಶವಾಣಿ ಪ್ರಸಾರ ಮಾಡುವ ಸುದ್ದಿಗಳನ್ನು ಖಾಸಗಿ ಎಫ್‍ಎಂ ಚಾನಲ್‍ಗಳ ಜತೆ ದೇಶಾದ್ಯಂತ ಹಂಚಿಕೊಳ್ಳಲಾಗುತ್ತದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ರಾಥೋಡ್ ಅವರು ಹೊಸದಿಲ್ಲಿಯಲ್ಲಿ ಈ ನೂತನ ಉಪಕ್ರಮಕ್ಕೆ ಚಾಲನೆ ನೀಡುವರು.

ಈ ಸುದ್ದಿಗಳನ್ನು ಸ್ವತಂತ್ರವಾಗಿ ಪ್ರಸಾರ ಮಾಡಲು ಖಾಸಗಿ ಎಫ್‍ಎಂ ಚಾನಲ್ ಗಳಿಗೆ ಅವಕಾಶವಿಲ್ಲ. ಆಕಾಶವಾಣಿ ಪ್ರಸಾರ ಮಾಡಿದ ಸುದ್ದಿಗಳನ್ನು ರಿಪ್ಯಾಕೇಜ್ ರೂಪದಲ್ಲಿ ಪ್ರಸಾರ ಮಾಡಲು ಅನುಮತಿ ನೀಡುವಂತೆ ಕೋರಿದ್ದ ಖಾಸಗಿಯವರ ಪ್ರಸ್ತಾಪವನ್ನು ಈ ಹಿಂದೆ ಸರ್ಕಾರ ತಿರಸ್ಕರಿಸಿ, ಇದನ್ನು ಮರುಪ್ರಸಾರ ಮಾಡಬೇಕು ಎಂದಷ್ಟೇ ಸೂಚಿಸಿತ್ತು.

ಸಾರ್ವತ್ರಿಕ ಚುನಾವಣೆಗೆ ಮುನ್ನ ಸರ್ಕಾರದ ಈ ವಿನೂತನ ಸಾಹಸದಲ್ಲಿ ಖಾಸಗಿ ಎಫ್‍ಎಂ ಕೇಂದ್ರಗಳು ಕೈಜೋಡಿಸುತ್ತವೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. 2018ರ ಜೂನ್‍ನಲ್ಲಿ, ಆಕಾಶವಾಣಿಯ ಸುದ್ದಿಯನ್ನು ಖಾಸಗಿ ಎಫ್‍ಎಂ ಚಾನಲ್‍ಗಳು ಮರುಪ್ರಸಾರ ಮಾಡುವ ಸಲುವಾಗಿ ಹಣಕಾಸು ಯೋಜನೆಯನ್ನು ರೂಪಿಸಲು ಖಾಸಗಿಯವರನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸುವುದಾಗಿ ಪ್ರಸಾರ ಭಾರತಿ ಪ್ರಕಟಿಸಿತ್ತು.

ಆಕಾಶವಾಣಿಯ ಸುದ್ದಿ ಮರುಪ್ರಸಾರದ ಮೂಲಕ ಖಾಸಗಿ ಎಫ್‍ಎಂ ಕೇಂದ್ರಗಳ ಶ್ರೋತೃವರ್ಗವನ್ನು ಪಡೆಯುವುದು ಮಾತ್ರವಲ್ಲದೇ, ಸರ್ಕಾರದ ಯೋಜನೆಗಳ ಜಾಹೀರಾತಿಗೆ ಕೂಡಾ ಸಂಪನ್ಮೂಲವನ್ನು ಸಚಿವಾಲಯ ಕ್ರೋಢೀಕರಿಸುತ್ತಿದೆ. 2019ರ ಚುನಾವಣೆಗೆ ಸರ್ಕಾರ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ 2018-19ರಲ್ಲಿ ಸಚಿವಾಲಯದ ಜಾಹೀರಾತು ಬಜೆಟ್ ಶೇಕಡ 20ರಷ್ಟು ಹೆಚ್ಚುವ ನಿರೀಕ್ಷೆ ಇದೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News