ರಥಯಾತ್ರೆಗೆ ಅನುಮತಿ ಕೋರಿದ ಬಿಜೆಪಿ: ಪ.ಬಂ. ಸರಕಾರದ ಪ್ರತಿಕ್ರಿಯೆ ಕೋರಿದ ಸುಪ್ರೀಂ

Update: 2019-01-08 16:30 GMT

ಹೊಸದಿಲ್ಲಿ, ಜ. 8: ಪಶ್ಚಿಮಬಂಗಾಳದಲ್ಲಿ ‘ರಥ ಯಾತ್ರೆ’ಗೆ ಅನುಮತಿ ನೀಡುವಂತೆ ಕೋರಿ ಬಿಜೆಪಿ ಸಲ್ಲಿಸಿದ ಮನವಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಪಶ್ಚಿಮಬಂಗಾಳ ಸರಕಾರಕ್ಕೆ ನಿರ್ದೇಶಿಸಿದೆ. ‘ರಥ ಯಾತ್ರೆ’ಗೆ ಅನುಮತಿ ನೀಡಿ ಏಕಸದಸ್ಯ ಪೀಠ ನೀಡಿದ ಆದೇಶವನ್ನು ಬದಿಗೆ ಸರಿಸಿ ಕೋಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠ ಡಿಸೆಂಬರ್ 21ರಂದು ನೀಡಿದ ಆದೇಶ ಪ್ರಶ್ನಿಸಿ ಪಶ್ಚಿಮಬಂಗಾಳದ ಬಿಜೆಪಿ ಘಟಕ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು.

ರಾಜ್ಯ ಸರಕಾರ ಪರಿಶೀಲನೆಗೆ ‘ಪ್ರಜಾಪ್ರಭುತ್ವ ಉಳಿಸಿ ರ್ಯಾಲಿ’ಯ ಪರಿಷ್ಕೃತ ಯೋಜನೆ ಸಲ್ಲಿಸಿ ಎಂದು ಬಿಜೆಪಿಯ ರಾಜ್ಯ ಘಟಕಕ್ಕೆ ನ್ಯಾಯಮೂರ್ತಿ ಎಸ್.ಕೆ. ಕೌಲ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಪೀಠ ಹೇಳಿದೆ. ಈ ಪ್ರಕರಣದ ವಿಚಾರಣೆಯನ್ನು ಪೀಠ ಜನವರಿ 15ಕ್ಕೆ ಮುಂದೂಡಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 42 ಸಂಸದೀಯ ಕ್ಷೇತ್ರವನ್ನು ಒಳಗೊಳ್ಳುವಂತೆ ನಡೆಯಲಿರುವ ರ್ಯಾಲಿಗೆ ಅನುಮತಿ ಕೋರಿ ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News