ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಎಂಬ ಅನನ್ಯ ತೇಜಸ್ಸು

Update: 2019-01-08 16:43 GMT

ಆ ಕಣ್ಣಿನ ತೇಜಸ್ಸು, ಆ ಮನಸ್ಸಿನ ಓಜಸ್ಸು, ಅಪೂರ್ವವಾದ ಧಾರ್ಮಿಕ ಶಕ್ತಿ, ಪಾಂಡಿತ್ಯ-ಭಕ್ತಿ, ಸರಳತೆಯ ಸಾಕಾರ ಮೂರ್ತಿ, ನಾನು ಅತಿಯಾಗಿ ಪ್ರೀತಿಸುವ, ಅನನ್ಯವಾಗಿ ಗೌರವಿಸುವ ಮಹಾನ್ ಚೇತನ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ ಕಣ್ಮರೆಯಾದರು ಎನ್ನುವುದನ್ನು ಅರಗಿಸಲಾಗುತ್ತಿಲ್ಲ.

ಅದ್ಭುತ ಜ್ಞಾನ ಭಂಡಾರವನ್ನು ಹೊಂದಿರುವ ಮಿತ್ತಬೈಲ್ ಉಸ್ತಾದ್ ಎಂದಿಗೂ ಐಹಿಕ ಜೀವನವನ್ನು ಆಶಿಸಿದವರಲ್ಲ. ಪ್ರಯಾಣಕ್ಕೆ ಅದೇ ಹಳೇ ಅಂಬಾಸಿಡರ್ ಕಾರು ಅಥವಾ ಆಟೋ, ದೂರ ಪ್ರಯಾಣಕ್ಕೆ ಜನರಲ್ ಕೆಟಗರಿ ರೈಲನ್ನೇ ಬಳಸುವ ಉಸ್ತಾದರ ವಸ್ತ್ರಧಾರಣೆ, ಊರುಗೋಲಾಗಿ ಉಪಯೋಗಿಸುವ ಹಳೇ ಕಾಲದ ಕೊಡೆ, ಭುಜದಲ್ಲಿ ಹಸಿರು ಶಾಲು, ಮುಖದ ಮಂದಹಾಸ, ಕೈಯ್ಯಲ್ಲಿ ಸದಾ ಮಿನುಗುವ ತಸ್ಬೀಹ್ ಮಾಲೆ, ಇಸ್ಲಾಮಿಕ್ ವೇಷಭೂಷಣ, ಅಪೂರ್ವ ನಗು... ಎಲ್ಲವೂ ಇನ್ನು ನೆನಪು ಮಾತ್ರ ಎನ್ನಲು ಬೇಸರವಾಗುತ್ತಿದೆ.

ದೂರದ ದ್ವೀಪ ಪ್ರದೇಶ (ದೀವಿ) ಕಿಲ್ತಾನ್ ಎಂಬಲ್ಲಿನ ವಿದ್ವಾಂಸ ಕುಟುಂಬದಿಂದ ಬಂದ ಜಬ್ಬಾರ್ ಉಸ್ತಾದ್ ಕೇರಳದ ಹಲವೆಡೆ ವಿದ್ಯಾರ್ಜನೆಗೈದು ಬಿ.ಸಿ.ರೋಡ್ ನ ಮಿತ್ತಬೈಲು ಜುಮಾ ಮಸೀದಿಯಲ್ಲಿ ಸೇವೆಗೈಯ್ಯುವುದು ಹಲವು ದಶಕಗಳಾಯಿತು. ಕರಾವಳಿಗರಿಗೆ ಮಾತ್ರವಲ್ಲ ಕೇರಳ ಹಾಗೂ ಕರ್ನಾಟಕದ ಜನತೆಗೆ ಆಧ್ಯಾತ್ಮಿಕತೆಯ ನೆರಳಾಗಿ, ಸರಳತೆಯ ಪ್ರತಿರೂಪವಾಗಿ ಮೂಡಿಬಂದವರು ಜಬ್ಬಾರ್ ಉಸ್ತಾದ್.

ಅವರೆಂದೂ, ಯಾರಿಗೂ ನೋವು ಮಾಡಿದವರಲ್ಲ. ಏರು ಧ್ವನಿಯಲ್ಲಿ ಮಾತಾಡಿದವರಲ್ಲ. ಶ್ರೀಮಂತರು, ಬಡವರೆನ್ನದೆ ನನ್ನಂತಹ ಸಾಮಾನ್ಯರನ್ನು ಕೂಡಾ ಆತ್ಮೀಯತೆಯಿಂದ ಮಾತಾಡಿಸುವ ಅದಮ್ಯ ವ್ಯಕ್ತಿತ್ವ ಉಸ್ತಾದರದ್ದು. ನಾವು ಬಹುದೊಡ್ಡ ಆಸ್ತಿ ಮತ್ತು ಶಕ್ತಿಯನ್ನು ಕಳಕೊಂಡಿದ್ದೇವೆ. ಅಲ್ಲಾಹನು ಅವರ ಪಾರತ್ರಿಕ ಜೀವನವನ್ನು ಸುಗಮಗೊಳಿಸಲಿ ಎಂಬ ಪ್ರಾರ್ಥನೆಯೊಂದಿಗೆ.
-ರಶೀದ್ ವಿಟ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News