×
Ad

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯದಲ್ಲಿ ಬಂದ್

Update: 2019-01-08 22:58 IST

ಗುವಾಹತಿ, ಜ. 8: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆ ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಕರೆ ನೀಡಿದ್ದ 11 ಗಂಟೆಗಳ ಈಶಾನ್ಯ ಬಂದ್ ಬಿಗಿ ಭದ್ರತೆ ನಡುವೆ ಮಂಗಳವಾರ ಬೆಳಗ್ಗೆ 5 ಗಂಟೆಗೆ ಆರಂಭವಾಯಿತು. ಅಸ್ಸಾಂನಲ್ಲಿ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ 10 ವರ್ಷಗಳ ದೀರ್ಘ ಅಂತರದ ಬಳಿಕ ರಾಜ್ಯ ವ್ಯಾಪಿ ಬಂದ್‌ಗೆ ಕರೆ ನೀಡಿತು. ಈ ಬಂದ್‌ಗೆ ಅಸ್ಸಾಂನಲ್ಲಿ ಬಿಜೆಪಿಯಿಂದ ಬೆಂಬಲ ಹಿಂದೆ ತೆಗೆದ ಅಸ್ಸಾಂ ಗಣ ಪರಿಷದ್ (ಎಜಿಪಿ) ಹಾಗೂ ಪ್ರತಿಪಕ್ಷ ಕಾಂಗ್ರೆಸ್, ಎಐಯುಡಿಎಫ್, ಕೃಷಿಕ ಮುಕ್ತ್ತಿ ಸಂಗ್ರಾಮ ಸಮಿತಿ (ಕೆಎಂಎಸ್‌ಎಸ್) ಬೆಂಬಲ ನೀಡಿವೆ. ವಾಹನಗಳ ಸಂಚಾರ ನಿರ್ಬಂಧಿಸಲು ಅಸ್ಸಾಂನ ವಿವಿಧ ಭಾಗಗಳ ರಸ್ತೆಯಲ್ಲಿ ಪ್ರತಿಭಟನಕಾರರು ಟಯರ್ ಉರಿಸಿದರು. ಗುವಾಹತಿ, ತೀನ್‌ ಸುಕಿಯಾ ಹಾಗೂ ದಿಬ್ರುಗಢ ಜಿಲ್ಲೆಗಳಲ್ಲಿ ವಾಹನಗಳಿಗೆ ಹಾನಿ ಉಂಟು ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಗುವಾಹತಿ ಹಾಗೂ ದಿಬ್ರುಗಢದಲ್ಲಿ ಸ್ಪಲ್ಪ ಸಮಯಗಳ ಕಾಲ ರೈಲು ಸಂಚಾರ ತಡೆಯಲಾಯಿತು.

ಗುವಾಹತಿ ಮೀಸಲು ಪೊಲೀಸರು ಪ್ರತಿಭಟನಕಾರರನ್ನು ಹಳಿಯಿಂದ ತೆರವುಗೊಳಿಸಿದ ಬಳಿಕ ದಿಲ್ಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಸಹಿತ ಹಲವು ರೈಲುಗಳು ಸಂಚರಿಸಿದವು. ರೈಲು ಹಾಗೂ ವಿಮಾನಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಿದವು. ಅಂಗಡಿ, ಮಾರುಕಟ್ಟೆ, ಹಣಕಾಸಿನ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಕಚೇರಿಗಳು ಮುಚ್ಚಿದ್ದವು. ವಾಹನಗಳು ರಸ್ತೆಗಳಿಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News