ಟೀಮ್ ಇಂಡಿಯಾಕ್ಕೆ ಬಿಸಿಸಿಐ ಬಹುಮಾನ
ಹೊಸದಿಲ್ಲಿ, ಜ.8: ಆಸ್ಟ್ರೇಲಿಯ ನೆಲದಲ್ಲಿ ಮೊತ್ತ ಮೊದಲ ಬಾರಿ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಿಸಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಮಂಗಳವಾರ ಅಭಿನಂದನೆ ಸಲ್ಲಿಸಿರುವ ಬಿಸಿಸಿಐ, ತಂಡದ ಸದಸ್ಯರುಗಳು, ಕೋಚ್‌ಗಳು ಹಾಗೂ ಇತರ ಸಹಾಯಕ ಸಿಬ್ಬಂದಿಗೆ ನಗದು ಬಹುಮಾನವನ್ನು ಘೋಷಿಸಿದೆ.
ಭಾರತ ಸಿಡ್ನಿಯಲ್ಲಿ ಸೋಮವಾರ ಕೊನೆಗೊಂಡ 4ನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸುವುದರೊಂದಿಗೆ 4 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡು ಬೀಗಿತ್ತು.
ವಿರಾಟ್ ಕೊಹ್ಲಿ ಪಡೆ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡ ಏಶ್ಯದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಟಗಾರರು ಪಂದ್ಯ ಶುಲ್ಕಕ್ಕೆ ಸಮನಾಗಿ ಬೋನಸ್ ಸ್ವೀಕರಿಸಲಿದ್ದು, ಅಂತಿಮ-11ರ ಬಳಗದಲ್ಲಿದ್ದ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷ ರೂ. ಹಾಗೂ ಮೀಸಲು ಆಟಗಾರರು 7.5 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತಿಳಿಸಿದೆ.
ಕೋಚ್‌ಗಳು ತಲಾ 25 ಲಕ್ಷ ರೂ., ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿ ಬೋನಸ್‌ಗೆ ಸಮನಾಗಿ ವೃತ್ತಿಪರ ಶುಲ್ಕ ಪಡೆಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.