×
Ad

ದಾಖಲೆಯ 9ನೇ ಬಾರಿ ಶರತ್ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್

Update: 2019-01-09 23:47 IST

ಕಟಕ್, ಜ.9: ತಜ್ಞ ಆಟಗಾರ ಶರತ್ ಕಮಲ್ ಅವರು ಅತೀ ಹೆಚ್ಚು ಬಾರಿ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ ಪಟ್ಟ ಧರಿಸಿದ ಕಮಲೇಶ್ ಮೆಹ್ತಾ ಅವರ ದಾಖಲೆಯನ್ನು ಬುಧವಾರ ಮುರಿದಿದ್ದಾರೆ. ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶರತ್, ಭಾರತ ತಂಡದ ತಮ್ಮ ಸಹ ಆಟಗಾರ ಜಿ.ಸತ್ಯನ್ ಅವರನ್ನು 4-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಆ ಮೂಲಕ 9ನೇ ಬಾರಿ ಕಿರೀಟ ಧರಿಸಿ, 8 ಬಾರಿ ಚಾಂಪಿಯನ್ ಆಗಿದ್ದ ಕಮಲೇಶ್ ಮೆಹ್ತಾ ಅವರ ದಾಖಲೆಯನ್ನು ಅಳಿಸಿ ಹಾಕಿದರು.

ಕುತೂಹಲಕಾರಿ ಅಂತಿಮ ಪಂದ್ಯದಲ್ಲಿ ವಿಶ್ವ ರ್ಯಾಂಕಿಂಗ್‌ನಲ್ಲಿ 30ನೇ ಸ್ಥಾನದಲ್ಲಿರುವ ಶರತ್, 31ನೇ ಸ್ಥಾನದಲ್ಲಿರುವ ಸತ್ಯನ್ ವಿರುದ್ಧ ಗೆಲ್ಲಲು ಭಾರೀ ಪರಿಶ್ರಮ ಪಡಬೇಕಾಯಿತು. ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಒಂದು ಬಾರಿಯೂ ಸತ್ಯನ್ ಪ್ರಶಸ್ತಿ ಪಡೆದಿಲ್ಲ. ಶರತ್ ಪಂದ್ಯ ಶೀಘ್ರ ಮುಗಿಸಲು ಅವಕಾಶವಿತ್ತು. ಆದರೆ ಸತ್ಯನ್ ಭಾರೀ ಪೈಪೋಟಿ ನೀಡಿದರು. ಅಂತಿಮವಾಗಿ ಶರತ್ 4-3ರಿಂದ ಪಂದ್ಯ ಗೆದ್ದು ಬೀಗಿದರು.

► ಕರ್ನಾಟಕದ ಅರ್ಚನಾ ಕಾಮತ್‌ಗೆ ಮಹಿಳಾ ವಿಭಾಗದ ಪ್ರಶಸ್ತಿ: ಯುವ ಆಟಗಾರ್ತಿ ಕರ್ನಾಟಕದ ಮಹಿಳಾ ಕಾಮತ್, ಪ.ಬಂಗಾಳದ ಕೃತ್ವಿಕಾ ಅವರನ್ನು ಸೋಲಿಸಿ ಪ್ರಥಮ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು. ಸೆಮಿಫೈನಲ್‌ನಲ್ಲಿ ಮಣಿಕಾ ಬಾತ್ರಾ ಅವರನ್ನು ಮಣಿಸಿ ಉತ್ಸಾಹ ಇಮ್ಮಡಿಗೊಳಿಸಿಕೊಂಡಿದ್ದ ಅವರು, ಪ.ಬಂಗಾಳದ ಕೃತ್ವಿಕಾ ಅವರನ್ನು ಹೋರಾಟದ ಪಂದ್ಯದಲ್ಲಿ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News