ಭಾರತ ಹಾಕಿ ಕೋಚ್ ಹರೇಂದ್ರಗೆ ಗೇಟ್‌ಪಾಸ್
ಹೊಸದಿಲ್ಲಿ, ಜ.9: ಕಳೆದ ವರ್ಷ ಭಾರತ ತಂಡ ನಿರಾಶಾದಾಯಕ ಪ್ರದರ್ಶನ ತೋರಿದ ಕಾರಣ ಹಾಕಿ ತಂಡದ ಮುಖ್ಯ ಕೋಚ್ ಹರೇಂದ್ರ ಸಿಂಗ್‌ರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ಸಿಂಗ್‌ಗೆ ರಾಷ್ಟ್ರೀಯ ಹಾಕಿ ಒಕ್ಕೂಟ ಪರ್ಯಾಯವಾಗಿಭಾರತ ಜೂನಿಯರ್ ಹಾಕಿ ತಂಡದ ಕೋಚ್ ಹುದ್ದೆ ವಹಿಸಿಕೊಳ್ಳುವ ಕೊಡುಗೆ ನೀಡಿದೆ.
ಭಾರತ ಹಾಕಿಯಲ್ಲಿ ಕೋಚ್‌ಗಳ ತಲೆದಂಡ ಹಾಗೂ ಬದಲಾಯಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಹರೇಂದ್ರ ಅವರದ್ದು ಈಗ ಹೊಸ ಸೇರ್ಪಡೆ. 2018ರ ಮೇ ನಲ್ಲಿ ಅವರು ತಂಡದ ಕೋಚ್ ಹುದ್ದೆ ವಹಿಸಿಕೊಂಡಿದ್ದರು.
ಹರೇಂದ್ರ ಅವರನ್ನು ತೆಗೆದುಹಾಕಿದ ಕುರಿತು ತನ್ನ ಹೇಳಿಕೆಯಲ್ಲಿ ಕಾರಣ ನೀಡಿರುವ ಒಕ್ಕೂಟ, 2018ರ ವರ್ಷ ಭಾರತ ಹಾಕಿ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿತ್ತು. ನಾವು ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಜೂನಿಯರ್ ವಿಭಾಗದಲ್ಲಿ ಪರಿಶ್ರಮ ಹಾಕುವುದರಿಂದ ದೀರ್ಘಾವಧಿಲಾಭದ ಕೊಯ್ಲು ಮಾಡಬಹುದು ಎಂದು ಹಾಕಿ ಇಂಡಿಯಾ ನಂಬಿದೆ’’ ಎಂಬುದಾಗಿ ತಿಳಿಸಿದೆ.
ಈ ಹಿಂದೆ ಜೂನಿಯರ್ ವಿಭಾಗದಲ್ಲಿ ಕೋಚ್ ಆಗಿದ್ದ ಹರೇಂದ್ರ ಸಿಂಗ್, ತಂಡವನ್ನು ವಿಶ್ವಕಪ್ ಗೆಲುವಿನವರೆಗೆ ಮುನ್ನಡೆಸಿದ್ದರು. ಆದರೆ ಹಿರಿಯರ ತಂಡದಲ್ಲಿ ಅವರ ಕರಾಮತ್ತು ನಡೆದಿಲ್ಲ.
ಸುಲ್ತಾನ್ ಅಝ್ಲಾನ್ ಶಾ ಹಾಕಿ ಪಂದ್ಯಾವಳಿಯ ತಯಾರಿಗಾಗಿ ಫೆಬ್ರವರಿಯಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಿದ್ದು, ಹಾಕಿ ಇಂಡಿಯಾ ಶೀಘ್ರದಲ್ಲೇ ತಂಡದ ಮುಖ್ಯ ಕೋಚ್‌ಗಾಗಿ ಜಾಹೀರಾತು ನೀಡಲಿದೆ ಹಾಗೂ ಅರ್ಜಿಗಳನ್ನು ಆಹ್ವಾನಿಸಲಿದೆ. ಅಲ್ಲಿಯವರೆಗೆ ತಂಡದ ಜವಾಬ್ದಾರಿಯನ್ನು ಹಾಕಿ ಇಂಡಿಯಾದ ಉನ್ನತ ಪ್ರದರ್ಶನದ ನಿರ್ದೇಶಕ ಡೇವಿಡ್ ಜಾನ್ ಹಾಗೂ ಸದ್ಯದ ವಿಶ್ಲೇಷಕ ಕೋಚ್ ಕ್ರಿಸ್ ಸಿರಿಲ್ಲೊ ವಹಿಸಿಕೊಳ್ಳಲಿದ್ದಾರೆ ಎಂದು ಹಾಕಿ ಇಂಡಿಯಾದ ಹೇಳಿಕೆ ತಿಳಿಸಿದೆ.